ಉಡುಪಿ, ಏ 17 (Daijiworld News/MSP): ಕಳೆದೆರಡು ದಿನಗಳ ಹಿಂದೆ ಐನೂರು, ಎರಡು ಸಾವಿರ ಮುಖ ಬೆಲೆಯ ನಕಲಿ ನೋಟುಗಳನ್ನು ರಸ್ತೆಯಲ್ಲಿ ಎಸೆದು ಆತಂಕ ಕಾರಣವಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಪೊಲೀಸರು ಪತ್ತೆ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಬಾಲಕ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕೃಷ್ಣ ಮಠ ಸಮೀಪ ವಾದಿರಾಜ ನಗರ ರಸ್ತೆಯಲ್ಲಿ ನಕಲಿ ನೋಟುಗಳನ್ನು ಎಸೆದು ಪರಾರಿಯಾಗಿದ್ದ. ಇದನ್ನು ಕಂಡ ಕೆಲವರು ನೋಟುಗಳನ್ನು ಹೆಕ್ಕಿ ಪೊಲೀಸರಿಗೂ ಮಾಹಿತಿ ನೀಡಿದ್ದರು. ಸಾರ್ವಜನಿಕರೊಬ್ಬರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿ ಕೆಮರಾ ಮೂಲಕ ಹುಡುಕಲಾರಂಭಿಸಿದಾಗ ಅದು ಹೈಸ್ಕೂಲ್ ವಿದ್ಯಾರ್ಥಿಯೋರ್ವನ ಕೃತ್ಯ ಎಂಬುದು ತಿಳಿಯಿತು. ಬಳಿಕ ಪೊಲೀಸರು ಬಾಲಕನನ್ನು ವಿಚಾರಿಸಿದಾಗ, ಚಹಾ ಪುಡಿ ತರಲು ಅಂಗಡಿಗೆ ಹೋಗಿ ವಾಪಸ್ ಬರುವಾಗ ನನ್ನ ಬಳಿ ಇದ್ದ ಚಿಲ್ಡ್ರನ್ಸ್ ರಿಸರ್ವ್ ಬ್ಯಾಂಕ್ (ಮಕ್ಕಳು ಆಟಕ್ಕೆ ಬಳಸುವ ನಕಲಿ ದುಡ್ಡು) ನ್ನು ಎಸೆದು ಬಂದೆ. ಉದ್ದೇಶಪೂರ್ವಕವಾಗಿ ಇದನ್ನು ಮಾಡಿಲ್ಲ ಎಂದಿದ್ದಾನೆ. ಬಳಿಕ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ .