ಮಂಗಳೂರು, ಏ 17 (Daijiworld News/MSP): ಮಂಗಳೂರು ಮೂಲದ 34 ವರ್ಷದ ಲಾಯಲ್ ಸಿಕ್ವೇರಾ ಏಪ್ರಿಲ್ 15 ರಂದು ಡಬ್ಲಿನ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದ ಬೆನ್ನಲ್ಲೇ, ಪತಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಪತ್ನಿ , 36 ವರ್ಷದ ಶರೋನ್ ಸಿಕ್ವೇರಾ ನೀ ಫೆರ್ನಾಂಡಿಸ್ ಏ. 16 ರಂದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
2016 ರ ಮೇನಲ್ಲಿ ವಿವಾಹವಾಗಿ ಐರ್ಲೆಂಡ್ ನಲ್ಲಿ ನೆಲೆಸಿದ್ದ ಯುವ ದಂಪತಿಗಳಿಗೆ ಇಬ್ಬರು ಮಕ್ಕಳದ್ದಾರೆ. ಲಾಯಲ್ ಅವರು ಡಬ್ಲಿನ್ನಲ್ಲಿ ವಾಸಿಸುವ ಲಿಗೊರಿ ಮತ್ತು ಲಿಲ್ಲಿ ಸಿಕ್ವೇರಾ ಅವರ ಪುತ್ರರಾಗಿದ್ದು, ಪತ್ನಿ ಶರೋನ್ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ಮೊಸಾಕೊ ಶಿಪ್ಪಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫ್ರಾಂಕ್ ಫೆರ್ನಾಂಡಿಸ್ ಮತ್ತು ಉಡುಪಿಯ ತೊಟ್ಟಂ ಮೂಲದ ಆಲಿಸ್ ಫೆರ್ನಾಂಡಿಸ್ ಅವರ ಪುತ್ರಿಯಾಗಿದ್ದಾರೆ.
ಐರ್ಲೆಂಡ್ನ ಸ್ಥಳೀಯ ಆನ್ಲೈನ್ ಸುದ್ದಿ ಪೋರ್ಟಲ್ ಪ್ರಕಾರ, ಲಾಯಲ್ ಅವರು ಏಪ್ರಿಲ್ 15 ರ ಮುಂಜಾನೆ ಎಂ1 ಕೋ ಮೀತ್ ರಸ್ತೆ ಮಾರ್ಗದಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿರುವಾಗ ಸೌತ್ ಡ್ರೋಗೆಡಾ ಜಂಕ್ಷನ್ 8 ಎಕ್ಸಿಟ್ ರಾಂಪ್ ಬಳಿ ಬೆಳಿಗ್ಗೆ 12.15 ಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಾರು ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.