ಉಡುಪಿ, ಏ 17 (Daijiworld News/MSP): ಆಸ್ಪತ್ರೆಗೆಂದು ರೋಗಿಯನ್ನು ಕರೆದೊಯ್ಯುತ್ತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ವಿಫ್ಟ್ ಡಿಸೈರ್ ಕಾರು ಭಸ್ಮವಾಗಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದ ಟೈಗರ್ ಸರ್ಕಲ್ ಬಳಿ ನಡೆದಿದೆ.
ಇಂದು ಬೆಳಿಗ್ಗೆ ಗರಡಿ ರಸ್ತೆಯ ನಿವಾಸಿಯೊಬ್ಬರು, ಕಾರಿನಲ್ಲಿ ರೋಗಿಯೊಬ್ಬರನ್ನು ಕರೆದುಕೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೋಗುತ್ತಿದ್ದರು. ಆಸ್ಪತ್ರೆ ತಲುಪಲು ಇನ್ನೇನು ಕೆಲವೇ ಮೀಟರ್ ದೂರ ಇರುವಾಗ ಈ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಕಾರಿನಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಹೊತ್ತುಕೊಂಡು ಉರಿದಿದೆ. ಕಾರಿನಲ್ಲಿದ್ದವರು ದುರ್ಘಟನೆಯಿಂದ ಪಾರಾಗಿದ್ದಾರೆ.
ಕಾರಿಗೆ ಬೆಂಕಿ ತಗುಲಿದ ತಕ್ಷಣ ಕೆಎಂಸಿ ಮಣಿಪಾಲ ಆಸ್ಪತ್ರೆಯ ಫೈರ್ ಇಂಜಿನ್ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಕ್ ಡೌನ್ ಇದ್ದರಿಂದ ಇಷ್ಟು ದಿನ ಮನೆಯಲ್ಲೇ ಕಾರು ನಿಲ್ಲಿಸಿದ್ದರು. ಇಂದು ಕಾರು ಚಲಿಸಿಕೊಂಡು ಬಂದಿದ್ದಾರೆ. ಶಾರ್ಟ್ ಸರ್ಕ್ಯೂಟ್ ಆಗಲು ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಯಿಂದ ಸುಮಾರು ೭ ಲಕ್ಷ ನಷ್ಟವಾಗಿದೆ ಎಂದು ತಿಳಿದುಬಂದಿದೆ.