ಮಂಗಳೂರು, ಏ 17(DaijiworldNews/SM): ದ.ಕ. ಜಿಲ್ಲೆಯಲ್ಲಿ ಶುಕ್ರವಾರದಂದು ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟರೂ, ಮತ್ತೊಂದೆಡೆ ಜಿಲ್ಲೆಯ ಜನತೆಗೆ ಗುಡ್ ನ್ಯೂಸ್ ಲಭಿಸಿದೆ. ಕೊರೊನಾ ಪಾಸಿಟಿವ್ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇದೀಗ ಜಿಲ್ಲೆಯಲ್ಲಿ ಕೇವಲ ಓರ್ವ ಸೋಂಕಿತ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಶುಕ್ರವಾರದಂದು ಪಾಸಿಟಿವ್ ಪತ್ತೆಯಾದ ವ್ಯಕ್ತಿ ಮಾತ್ರವೇ ವೆನ್ ಲಾಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಒಟ್ಟು ಹದಿಮೂರು ಮಂದಿ ಸೋಂಕಿತರ ಪೈಕಿ 12 ಮಂದಿ ಗುಣಮುಖರಾದಂತಾಗಿದ್ದು, ಕೇವಲ ಒಬ್ಬರು ಮಾತ್ರವೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಈ ನಡುವೆ ಇಎಸ್ ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವವರ ಪೈಕಿ 15 ಮಂದಿ ಬಿಡುಗಡೆಗೊಂಡಿದ್ದಾರೆ. ಇನ್ನು ಇದುವರೆಗೆ 5485 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಪೂರೈಸಿದ್ದಾರೆ. ಈ ಪೈಕಿ ಯಾರಲ್ಲೂ ಕೊರೊನಾ ಪಾಸಿಟಿವ್ ಕಂಡುಬಂದಿಲ್ಲ. ಇನ್ನು ಶುಕ್ರವಾರದಂದು ಸುಮಾರು 90 ಮಂದಿಯ ಪರೀಕ್ಷಾ ವರದಿ ಲಭ್ಯವಾಗಿದ್ದು 89 ಮಂದಿಯ ವರದಿ ನೆಗೆಟಿವ್ ಬಂದಿದೆ.
ಶುಕ್ರವಾರ ಗುಣಮುಖರಾದ ಸೋಂಕಿತರು:
1. 63 ವರ್ಷದ ಮಹಿಳೆ:
ಮಾರ್ಚ್ 21ರಂದು ದುಬೈಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಸಕ್ಕರೆ ಕಾಯಿಲೆ ಇದ್ದ ಕಾರಣ ಅವರನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಏಪ್ರಿಲ್ 4ರಂದು ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಮಹಿಳೆಗೆ ಐಸೋಲೇಷನ್ ನಲ್ಲಿ ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡಲಾಗಿದೆ. ಇದೀಗ ಚಿಕಿತ್ಸೆಗೆ ಸ್ಪಂಧಿಸಿ ಅವರು ಗುಣಮುಖರಾಗಿದ್ದಾರೆ. ಏಪ್ರಿಲ್ 15 ಹಾಗೂ 16ರಂದು ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿರುವ ಕಾರಣ ಶುಕ್ರವಾರದಂದು ಅವರನ್ನು ಬಿಡುಗಡೆಗೊಳಿಸಲಾಗಿದೆ.
2. 43 ವರ್ಷದ ಗಂಡಸು:
ಮಾರ್ಚ್ 22ರಂದು ದೆಹಲಿಯ ನಿಜಾಮುದ್ದೀನ್ ಸಮಾವೇಶದಿಂದ ಮಂಗಳೂರಿಗೆ ಆಗಮಿಸಿದ್ದ ವ್ಯಕ್ತಿಯನ್ನು ನಿಗಾದಲ್ಲಿರಿಸಲಾಗಿತ್ತು. ಏಪ್ರಿಲ್ 1ರಂದು ಅವರನ್ನು ವೈದ್ಯಕೀಯ ನಿಗಾದಲ್ಲಿಡಲಾಗಿತ್ತು. ಏಪ್ರಿಲ್ 2 ಹಾಗೂ 4ರಂದು ಪರೀಕ್ಷೆ ನಡೆಸಲಾಗಿದ್ದು, ಸೋಂಕು ದೃಢಪಟ್ಟಿತ್ತು. ನಿರಂತರವಾಗಿ ಐಸೋಲೇಷನ್ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗಿದ್ದು, ಏಪ್ರಿಲ್ 15 ಹಾಗೂ 16ರಂದು ಮತ್ತೆ ಗಂಟಲ ದ್ರವ ಪರೀಕ್ಷೆಗೊಳಪಡಿಸಲಾಗಿದೆ. ಈ ಸಂದರ್ಭ ನೆಗೆಟಿವ್ ವರದಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅವರನ್ನು ಬಿಡುಗಡೆಗೊಳಿಸಲಾಗಿದೆ.
3. 52 ವರ್ಷದ ಗಂಡಸು:
ಮಾರ್ಚ್ 22ರಂದು ದೆಹಲಿಯ ನಿಜಾಮುದ್ದೀನ್ ಸಮಾವೇಶದಿಂದ ಮಂಗಳೂರಿಗೆ ಆಗಮಿಸಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಏಪ್ರಿಲ್ 1ರಂದು ಅವರನ್ನು ವೈದ್ಯಕೀಯ ನಿಗಾದಲ್ಲಿರಿಸಲಾಗಿತ್ತು. ಏಪ್ರಿಲ್ ೪ರಂದು ಅವರಲ್ಲಿ ಸೋಂಕು ದೃಢಪಟ್ಟಿದೆ. ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಿದ ಬಳಿಕ ಇದೀಗ ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.