ಉಡುಪಿ, ಏ 17(DaijiworldNews/SM): ಕೊರೊನಾ ನಿಯಂತ್ರಣಕ್ಕೆ ದೇಶದೆಲ್ಲೆಡೆ ಲಾಕ್ ಡೌನ್ ಜಾರಿಯಲ್ಲಿದೆ. ಇದನ್ನು ಕರಾವಳಿಯಲ್ಲೂ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಖಾಸಗಿ ವಾಹನಗಳು ಅನಗತ್ಯ ಸಂಚಾರ ನಡೆಸದಂತೆ ಉಡುಪಿ ಹಾಗೂ ದ.ಕ. ಜಿಲ್ಲಾಡಳಿತ ಆದೇಶ ನೀಡಿದೆ. ಆದರೆ, ಆದೇಶ ಉಲ್ಲಂಘಿಸಿ ಸಾಕಷ್ಟು ಜನ ಸಂಚರಿಸುತ್ತಿದ್ದು, ಶುಕ್ರವಾರದಂದು ಅವರಿಗೆ ಶಾಕ್ ಎದುರಾಗಿದೆ. ಉದುಪಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರು ದಿಢೀರ್ ದಾಳಿ ನಡೆಸಿದ್ದು, ಹಲವು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದ್ದರೂ ಅನೇಕ ಮಂದಿ ಆದೇಶವನ್ನು ಪಾಲಿಸದೇ ಸಂಚಾರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುತ್ತಾರೆ. ಹಲವು ವಾಹನಗಳನ್ನು ಪೊಲೀಸರೇ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಈ ವಿಚಾರ ಒಂದು ಹೆಜ್ಜೆ ಮುಂದೆ ಸಾಗಿದೆ. ಕಚೇರಿಗಳಲ್ಲಿ ಕುಳಿತು ಆದೇಶವನ್ನು ನೀಡುವ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಫಿಲ್ಡಿಗಿಳಿದು, ನಿಯಮ ಉಲ್ಲಂಘಿಸುತ್ತಿದ್ದವರಿಗೆ ಸರಿಯಾಗಿಯೇ ಉತ್ತರಿಸಿದ್ದಾರೆ.
ಉಡುಪಿ ನಗರ ಪ್ರದೇಶ, ಕಲ್ಮಾಡಿ, ಮಲ್ಪೆ ಪ್ರದೇಶದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಹಾಗೂ ಎಸ್ಪಿ ವಿಷ್ಣುವರ್ಧನ್ ದಿಢಿರ್ ದಾಳಿ ನಡೆಸಿದ್ದಾರೆ. ಅನಗತ್ಯವಾಗಿ ರಸ್ತೆಯಲ್ಲಿ ತಿರುಗುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ. ಸ್ಥಳದಲ್ಲೇ ಸುಮಾರು ೪೦ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ೧೮ ಮಂದಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.