ಕಾಸರಗೋಡು, ಏ 17(DaijiworldNews/SM): ಬೆಂಕಿ ತಗಲಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬದಿಯಡ್ಕ ಸಮೀಪದ ನೆಲ್ಲಿಕಟ್ಟೆಯಲ್ಲಿ ನಡೆದಿದೆ.
ನೆಲ್ಲಿಕಟ್ಟೆ ಬಿಲಾಲ್ ನಗರದ ತಾಜುದ್ದೀನ್ ರವರ ಪುತ್ರಿ ಫಾತಿಮಾ(7) ಮೃತ ಬಾಲಕಿಯಾಗಿದ್ದಾಳೆ. ಸಹೋದರರಾದ ಅಬ್ದುಲ್ಲ( 9) ಮತ್ತು ಹಾಶೀರ್(13) ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.
ಬುಧವಾರ ಸಂಜೆ ಮನೆ ಸಮೀಪ ಹಿತ್ತಿಲಿನಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳಿಗೆ ಬೆಂಕಿ ತಗಲಿದ್ದು, ಬಳಿಕ ಕೋಜಿಕ್ಕೋಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಚಿಕಿತ್ಸೆಗೆ ಸ್ಪಂದಿಸದೆ ಫಾತಿಮಾ ಶುಕ್ರವಾರ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಚಿಕಿತ್ಸಾ ವೆಚ್ಚ ಭರಿಸಲು ಸರಕಾರ ತೀರ್ಮಾನ:
ಇನ್ನು ಬದಿಯಡ್ಕದ ನೆಲ್ಲಿಕಟ್ಟೆಯಲ್ಲಿ ಬೆಂಕಿ ತಗಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
ಕೇರಳ ಸಮುದಾಯ ಸುರಕ್ಷಾ ಮಿಷನ್ ವಿ. ಕೇರ್ ಯೋಜನೆ ಮೂಲಕ ಚಿಕಿತ್ಸಾ ವೆಚ್ಚ ಭರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.