ಬೆಳ್ತಂಗಡಿ, ಎ.18 (Daijiworld News/MB) : ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಮಾಡಲಾಗಿರುವ ಲಾಕ್ಡೌನ್ ಆದೇಶವನ್ನು ಸ್ವತಃ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರೇ ಉಲ್ಲಂಘನೆ ಮಾಡಿದ್ದು ಮಂಗಳೂರಿನಿಂದ ಚಾರ್ಮಾಡಿ ಮಾರ್ಗವಾಗಿ ಪ್ರಯಾಣಿಕರ್ನು ಸಾಗಿಸಿದ್ದಾರೆ. ಇದೀಗ ಮಂಗಳೂರು ತಾ. ಪಂ. ಅಧ್ಯಕ್ಷರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಈ ಕುರಿತಾಗಿ ಸೂಕ್ತ ಮಾಹಿತಿ ನೀಡಲು ದ.ಕ.ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೆಲ್ವಮಣಿ ಆರ್. ಅವರು ತಾ.ಪಂ ಅಧ್ಯಕ್ಷರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಮಂಗಳವಾರ ಚಾರ್ಮಾಡಿ ಚೆಕ್ಪೋಸ್ಟ್ ಮಾರ್ಗವಾಗಿ ಬಣಕಲ್ ಪೇಟೆಯಲ್ಲಿರುವ ಮನೆಯೊಂದಕ್ಕೆ ಮಂಗಳೂರು ತಾ.ಪಂ. ಅಧ್ಯಕ್ಷರು ಎಂಬ ನಾಮಫಲಕವಿದ್ದ ಕೆ.ಎ.19 ಜಿ.0986 ನೋಂದಣಿಯ ಬೊಲೆರೊ ವಾಹನದಲ್ಲಿ ಜನರನ್ನು ಕರೆದು ಕೊಂಡು ಬರಲಾಗಿದೆ ಎಂದು ಮಾಹಿತಿ ಲಭಿಸಿದ್ದು ದ. ಕ. ಜಿ. ಪಂ. ಸಿಇಒ ಶೋಕಾಸ್ ನೋಟಿಸ್ ನೀಡಿದ್ದಾರೆ.
ದೇಶದಾದ್ಯಂತ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದ್ದು ಸರಕಾರ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಆದರೆ ಈ ನಡುವೆಯೂ ಜನಪ್ರತಿನಿಧಿಗಳೇ ಈ ರೀತಿಯಾಗಿ ಕಾನೂನು ಉಲ್ಲಂಘನೆ ಮಾಡಿರುವುದರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವಿಡಿಯೋಗಳು ವೈರಲ್ ಆಗಿತ್ತು.
ಈ ಕುರಿತು ಮಾತನಾಡಿದ ದ.ಕ.ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೆಲ್ವಮಣಿ ಆರ್. ಅವರು ಮಂಗಳೂರು ತಾ. ಪಂ. ಅಧ್ಯಕ್ಷರ ವಾಹನದಲ್ಲಿ ಜನರನ್ನು ಸಾಗಿಸಲಾಗಿದೆ ಎಂಬುದರ ಕುರಿತಾಗಿ ಮಾಹಿತಿ ದೊರೆತಿದ್ದು ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಮೂರು ದಿನದ ಒಳಗಾಗಿ ಈ ಕುರಿತಂತೆ ಅವರಿಂದ ವರದಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಮೂಡಿಗೆರೆ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ಬಣಕಲ್ ಪಿಎಸ್ಐ ಶ್ರೀನಾಥ್ ರೆಡ್ಡಿ, ಬಣಕಲ್ ಗ್ರಾ. ಪಂ. ಅಧ್ಯಕ್ಷ ಸತೀಶ್, ಪಿಡಿಒ ಕೃಷ್ಣಪ್ಪ ಅವರು ಪ್ರಯಾಣಿಕರನ್ನು ತಂದು ಬಿಡಲಾಗಿದೆ ಎಂದು ಹೇಳಲಾದ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಬಣಕಲ್ ಪೊಲೀಸರು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದು ತಾ. ಪಂ. ಅಧ್ಯಕ್ಷರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.