ಮಂಗಳೂರು, ಏ18 (Daijiworld News/MSP): ಕೋವಿದ್ 19ಹರಡದಂತೆ ತಪ್ಪಿಸಲು ಸುಪ್ರಿಂಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಕಲಬುರ್ಗಿ, ಬೆಂಗಳೂರು ಜೈಲುಗಳಿಂದ ಈಗಾಗಲೇ ವಿಚಾರಣಾಧೀನ ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಕೋವಿಡ್-19 ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಪಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಜೈಲಿನಲ್ಲಿ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದೀಗ ಮಂಗಳೂರು ಕಾರಾಗೃಹದಲ್ಲೂ ಕೆಲವು ಮುತುವರ್ಜಿ ವಹಿಸಿದ್ದು, ಸಾಮಾಜಿಕ ಅಂತರ ನಿರ್ಮಾಣ ಮಾಡುವ ದೃಷ್ಟಿಯಿಂದ ಮಂಗಳೂರು ಕಾರಾಗೃಹದ ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ.
ಸುಮಾರು ವಿಚಾರಣಾಧೀನ 80 ಕೈದಿಗಳನ್ನು ಮಂಗಳೂರಿನಿಂದ ಕಾರವಾರ ಹಾಗು ಚಿಕ್ಕಮಗಳೂರು ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಸರ್ಕಾರಿ ಬಸ್ ಮೂಲಕ 40 ಜನ ಕೈದಿಗಳಂತೆ ಎರಡು ಬಸ್ ಗಳ ಮೂಲಕ ಕಾರವಾರ ಮತ್ತು ಚಿಕ್ಕಮಗಳೂರು ಜೈಲಿಗೆ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿದುಬಂದಿದೆ.