ಮಂಗಳೂರು, ಏ18 (Daijiworld News/MSP): ವಿಯೆಟ್ನಾಂನಿಂದ ನಗರಕ್ಕೆ ಆಗಮಿಸಿ ಕ್ವಾರಂಟೈನ್’ನಲ್ಲಿರುವ ಐವರು ವಿದೇಶಿಗರು ಕ್ವಾರಂಟೈನ್ ಆದೇಶ ಉಲ್ಲಂಘಿಸಿ ಸುತ್ತಾಟ ನಡೆಸಿದ್ದಲ್ಲದೆ ಅಪಾರ್ಟ್ ಮೆಂಟ್ನ ಗೋಡೆಗಳಿಗೆ ಉಗಿಯುವ ಮೂಲಕ ಆತಂಕ ಸೃಷ್ಟಿಸಿದ ಘಟನೆ ಮಂಗಳೂರು ನಗರದ ಕೊಡಿಯಲ್ ಬೈಲ್ನ ಖಾಸಗಿ ಅಪಾರ್ಟ್ ಮೆಂಟ್ನಲ್ಲಿ ನಡೆದಿದೆ.
ನಗರದ ಕೂಳೂರಿನಲ್ಲಿರುವ ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆಂದು ವಿಯೆಟ್ನಾಂ ನಿಂದ 5 ಮಂದಿ ವಿದೇಶಿಗರು ಕೊಡಿಯಲ್ ಬೈಲ್ನ ಅಪಾರ್ಟ್ಮೆಂಟ್ ನಲ್ಲಿ ವಾಸ್ತವ್ಯದಲ್ಲಿದ್ದರು. ಕೊರೊನಾ ಹಿನ್ನಲೆ ಜಿಲ್ಲಾಡಳಿತ ಈ 5 ಮಂದಿ ವಿದೇಶಿಗರಿಗೆ ಹೋಂ ಕ್ವಾರಂಟೈನ್ ಲ್ಲಿರುವಂತೆ ಆದೇಶ ಮಾಡಿತ್ತು.ಆದರೆ ಅದರಲ್ಲಿ ಇಬ್ಬರು ಯುವಕರು ಕ್ವಾರಂಟೈನ್ ಆದೇಶ ಪಾಲಿಸದೆ ಅಪಾರ್ಟ್ಮೆಂಟ್ ಸುತ್ತ ಬೇಕಾಬಿಟ್ಟಿ ತಿರುಗುತ್ತಿದ್ದರಿಂದ ಆತಂಕ ವ್ಯಕ್ತವಾಗಿತ್ತು.
ಅಪಾರ್ಟ್ಮೆಂಟ್ ಅಸೋಶಿಯೇಸನ್ನವರು ಸಿಸಿಟಿವಿ ವೀಕ್ಷಿಸಿದಾಗ ಇಬ್ಬರು ವಿದೇಶಿಗರು ಲಿಫ್ಟ್ನಲ್ಲಿ ಮಾಸ್ಕ್ ತೆಗೆದು ತಿರುಗಾಡುತ್ತಿದ್ದು ಕಂಡು ಬಂದಿದೆ. ಮಾತ್ರವಲ್ಲದೆ ಲಿಪ್ಟ್ನ ಸ್ವಚ್ಚತೆ ಕಾಪಾಡದೆ ಉಗಿದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ಹಿನ್ನಲೆ ಅಪಾರ್ಟ್ಮೆಂಟ್ನ ಅಸೋಶಿಯೇಶನ್ನವರು ಬರ್ಕೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಆರೋಗ್ಯ ಅಧಿಕಾರಿಗಳು ೫ ಮಂದಿ ವಿದೇಶಿಗರನ್ನೂ ವಶಕ್ಕೆ ತೆಗೆದುಕೊಂಡು ಆರೋಗ್ಯ ಪರೀಕ್ಷೆಗಾಗಿ ವೆನ್ಲಾಕ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕ್ರಮ ಜರುಗಿಸಿದ್ದಾರೆ ಎಂದು ತಿಳಿದುಬಂದಿದೆ.