ಮಂಗಳೂರು, ಏ18 (Daijiworld News/MSP): ನಗರದ ಹೊರವಲಯದ ತಣ್ಣೀರುಬಾವಿಯ ಗಣೇಶಕಟ್ಟೆ ಬಳಿ ಕೊಲೆ ಪ್ರಕರಣದ ಆರೋಪಿ ಮೇಲೆ ದಾಳಿ ನಡೆಸಿದ ಐವರ ತಂಡ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ರೌಡಿಶೀಟರ್ ಭರತೇಶ್ ಸಹೋದರ ಶಿವರಾಜ್ ಹತ್ಯೆ ಪ್ರಕರಣ ಪ್ರಮುಖ ಆರೋಪಿ ಧೀರಜ್ ಪೂಜಾರಿ (27) ದಾಳಿಗೊಳಗಾದ ಕೊಲೆ ಆರೋಪಿಯಾಗಿದ್ದಾನೆ.
(ಒಳಚಿತ್ರ - ಹತ್ಯೆಯಾದ ಶಿವರಾಜ್)
ರೌಡಿಶೀಟರ್ ಭರತೇಶ್ ಸಹೋದರ ಶಿವರಾಜ್ ಹತ್ಯೆ ಪ್ರಕರಣದಲ್ಲಿ ಜೈಲಿನಿಂದ ಜಾಮೀನು ಪಡೆದು ಹೊರಬಂದಿದ್ದ ಗಣೇಶಕಟ್ಟೆಯ ನಿವಾಸಿ ಧೀರಜ್ ಶುಕ್ರವಾರ ಮನೆ ಬಳಿ ನಿಂತಿದ್ದಾಗ ಈ ದಾಳಿ ನಡೆದಿದೆ. ದುಷ್ಕರ್ಮಿಗಳ ದಾಳಿಯಿಂದ ಹಲ್ಲೆಗೊಳಗಾದ ಧೀರಜ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: 2018ರ ಜನವರಿ 22ರ ನಸುಕಿನ ಜಾವ ಮನೆಯಮೇಲೆ ಮಲಗಿದ್ದ ರೌಡಿಶೀಟರ್ ಭರತೇಶ್ ಸಹೋದರ ಶಿವರಾಜ್ ಸ್ಥಳೀಯರೇ ಆಗಿದ್ದ ಹಂತಕರು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಧೀರಜ್ ಪೂಜಾರಿ , ಸುನೀಲ್ (32), ಗದಗ ಮೂಲದ ಮಲ್ಲೇಶ್ (23) ಎಂಬ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಆರೋಪಿ ಧೀರಜ್ ಸಂಜೆ ಮನೆಯಲ್ಲಿ ಬಳಿ ನಿಂತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಸ್ಕ್ರೂ ಡ್ರೈವರ್ ನವೀನ್, ಮುತ್ತು ಸುನೀಲ್ ಮತ್ತವರ ತಂಡ ಚೂರಿಯಿಂದ ಇರಿಯಲು ಮುಂದಾಗಿದೆ. ತಕ್ಷಣ ಸ್ಥಳೀಯರು ಧೀರಜ್ ರಕ್ಷಣೆಗೆ ಧಾವಿಸಿದ್ದರಿಂದ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.