ಬೆಳ್ತಂಗಡಿ, ಏ18 (Daijiworld News/MSP): ಇಂದು ದೇಶ ಹಾಗೂ ರಾಜ್ಯದ ಎಲ್ಲ ಸರಕಾರಿ ಇಲಾಖಾಧಿಕಾರಿಗಳು ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲಾಕ್ ಡೌನ್ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಗಳಂತೂ ಅಹರ್ನಿಷಿ ಶ್ರಮ ಪಡುತ್ತಿದ್ದಾರೆ. ಆದರೆ ಇಂತಹ ಸಂಕಷ್ಟದ ಸಂದಿಗ್ಧ ಸಂದರ್ಭದಲ್ಲಿ ಬೆಂಗಳೂರು ನೊಂದಾವಣೆಯ ಸರಕಾರಿ ಪೊಲೀಸ್ ಅಧಿಕಾರಿಯ ವಾಹನವೊಂದು ಬೆಳ್ತಂಗಡಿಯ ಪೇಟೆಯಲ್ಲಿರುವ ರಾಜ್ಯ ಹೆದ್ದಾರಿಯಲ್ಲಿ ಎಪ್ರಿಲ್ 17ರ ಅಪ ರಾತ್ರಿಯಿಂದ ನಿಂತಿದ್ದು, ಈ ಪೊಲೀಸ್ ಅಧಿಕಾರಿಯ ಕಾರು ಬೆಳ್ತಂಗಡಿಗೆ ಯಾಕೆ ಬಂತು ಎಂಬುದೀಗ ಉತ್ತರ ಹುಡುಕಬೇಕಾದ ಪ್ರಶ್ನೆಯಾಗಿದೆ.
ಕೆಎ50ಜಿ81 ನೋಂದಾವಣೆ ಸಂಖ್ಯೆ ಹೊಂದಿರುವ ಈ ಪೊಲೀಸ್ ಕಾರಿನ ಹಿಂಬದಿಯಲ್ಲಿ ಗ್ಲಾಸಿಗೆ ಅಂಟಿಸಿದ ಸ್ಟಿಕ್ಕರಿನಲ್ಲಿ 'ಕರ್ನಾಟಕ ಸ್ಟೇಟ್ ಪೊಲೀಸ್, ಬೆಂಗಳೂರು ಸಿಟಿ, ಕೋವಿಡ್-19 ಸ್ಪೆಶಲ್ ಡ್ಯೂಟಿ' ಎಂದು ಬರೆಯಲಾಗಿದೆ. ಅಂದ ಮೇಲೆ ಈ ಪೊಲೀಸ್ ವಾಹನ ಬೆಂಗಳೂರು ಸಿಟಿಯಲ್ಲಿ ಕೋವಿಡ್-19 ವಿಶೇಷ ಸೇವೆಗೆ ಮೀಸಲಾದ ವಾಹನ ಎಂದಾಯಿತು. ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಯಿಂದ ಬಳಕೆಯಾಗಬೇಕಾದ ಈ ಕಾರು ಬೆಳ್ತಂಗಡಿಗೆ ಯಾಕಾಗಿ ಬಂತು? ಒಂದೊಮ್ಮೆ ಈ ಹಿಂದಿನ ಯಾವುದೋ ತುರ್ತು ಕ್ರಿಮಿನಲ್ ಪ್ರಕರಣಗಳ ತನಿಖೆಗೆ ಅಥವಾ ಯಾವುದೇ ಪ್ರಕರಣಗಳ ಆರೋಪಿಗಳ ಬಂಧನಕ್ಕೆ ತುರ್ತಾಗಿ ಬೆಂಗಳೂರಿನಿಂದ ಬಂದ ಪೊಲೀಸ್ ವಾಹನವಾದರೆ, ನಿಯಮದಂತೆ ಸದ್ರಿ ಪೊಲೀಸ್ ಅಧಿಕಾರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿತ್ತು.
ಲಭ್ಯ ಮಾಹಿತಿಯಂತೆ ಈ ಪೊಲೀಸ್ ವಾಹನ ಬೆಳ್ತಂಗಡಿಗೆ ಯಾಕೆ ಬಂತು ಎಂಬ ಬಗ್ಗೆ ಬೆಳ್ತಂಗಡಿಯ ಪೊಲೀಸರಿಗೂ ಮಾಹಿತಿ ಇದ್ದಂತಿಲ್ಲ. ಅಂದ ಮೇಲೆ ಈ ಪೊಲೀಸ್ ವಾಹನ ಬೆಳ್ತಂಗಡಿಗೆ ಬಂದ ಬಗ್ಗೆ ತನಿಖೆಯಾಗಬೇಕಲ್ವಾ ಎಂದು ಜನತೆ ಪ್ರಶ್ನಿಸಿತೊಡಗಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನಹರಿಸಿ, ಸರಕಾರಕ್ಕೆ ತನಿಖೆಗೆ ಸೂಚಿಸುವಂತಾಗಲಿ.