ಉಳ್ಳಾಲ, ಮಾ 06: ಮಂತ್ರಿ ಪದವಿ ಸಿಕ್ಕ ಬಳಿಕ ಸದನದಲ್ಲಿ ಮೊದಲ ಚರ್ಚೆಯಲ್ಲಿ ಗುಟ್ಕಾ ನಿಷೇಧಿಸಿದ್ದು ರಾಜ್ಯಾದ್ಯಂತ ಬಲು ದೊಡ್ಡ ಚರ್ಚೆಯಾಗಿತ್ತು. ಪ್ರತಿಪಕ್ಷಗಳು ನನಗೆ ಅನುಭವದ ಕೊರತೆ ಎಂಬ ಆರೋಪ ಹೊರಿಸಿತ್ತು. ಆದರೆ ಜನರ ಪ್ರತಿಪಕ್ಷದ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಟ್ಟ ಬಳಿಕ ಮಂತ್ರಿಯಾಗಿ ಬಹಳಷ್ಟು ಯೋಜನೆ ಅನುಷ್ಠಾನಕ್ಕೆ ತರಲು ಸಾಧ್ಯವಾಗಿದೆ. ನನ್ನ ಶಾಸಕತ್ವದ ಅವಧಿಯಿಂದಲೇ ಅಭಿವೃದ್ಧಿಯೇ ನನ್ನ ಗುರಿಯಾಗಿಸಿಕೊಂಡಿದ್ದೇನೆ ಎಂದು ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರದ ಕಾರ್ಯಕರ್ತರು ಭಾನುವಾರ ಆಯೋಜಿಸಿದ ಸಚಿವ ಯು. ಟಿ. ಖಾದರ್ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಿಡ್ನಿ ಟ್ರಾನ್ಸ್ ಪ್ಲೆಂಟ್ ಗೆ ಜೀವನ ಪೂರ್ತಿ ಚಿಕಿತ್ಸೆ ಸೌಲಭ್ಯ ದೊರಕಿಸಿ ಕೊಡಲಾಗಿದೆ. ರೇಶನ್ ಕಾರ್ಡ್ ವಿತರಣೆ ಸಮಸ್ಯೆ ನೀಗಿಸಲಾಗಿದೆ. ಎಪಿಎಲ್ ಬಿಪಿಎಲ್ ಅಂತರ ಬಹಳಷ್ಟಿದ್ದು ಅದನ್ನು ಸಮರ್ಪಕವಾಗಿ ನೀಗಿಸಲಾಗಿದೆ. ಕಡಿಮೆ ವೇತನಕ್ಕೆ ದುಡಿಯುವ ಜನರಿಗೆ ಬಿಪಿಎಲ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ನುಡಿದರು.
ಕ್ಷೇತ್ರದಲ್ಲಿ ಯಾವ ಕ್ಷೇತ್ರಕ್ಕೆ ಯಾವ ಕೆಲಸದ ಅಗತ್ಯತೆ ಇದೆ ಎಂಬ ಕುರಿತು ತನಗೆ ಮನದಟ್ಟಾದರೆ ಮಾತ್ರ ಆ ಕೆಲಸ ಮಾಡುವ, ಯಾರದ್ದೇ ಯಾವುದೇ ಶಿಫಾರಸಿಗೆ ಮಣಿಯದೆ ಅನುದಾನ ಮಂಜೂರು ಮಾಡುವ ಸಚಿವ ಯು.ಟಿ. ಖಾದರ್ ಅವರು ತನ್ನ ಶಾಸಕತ್ವದ ಮೂರು ಅವಯಲ್ಲಿ ಕ್ರಾಂತಿಕಾರಿ ಅಭಿವೃದ್ಧಿ ಕಾರ್ಯ ನಡೆಸಿದ್ದು ನಿಜವಾಗಿಯೂ ಅವರು ಅಭಿನಂದನಾರ್ಹರು ಎಂದು ಕೈರಂಗಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ತೋಡುಗುಳಿ ಮಹಾಬಲೇಶ್ವರ ಭಟ್ ಹೇಳಿದರು.
ಬಂಟ್ವಾಳ ತಾಲೂಕ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಿ. ಕರ್ಕೇರ, ಮುಡಿಪು ಚರ್ಚ್ನ ಬೆಂಜಮಿನ್ ಪಿಂಟೋ , ಪೊಲದವರ ಯಾನೆ ಗಟ್ಟಿ ಸಮಾಜದ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಮುಡಿಪು ವಿಶ್ವಕರ್ಮ ಸಮಾಜದ ಪ್ರತಿನಿಧಿ ಗಿರೀಶ್ ಆಚಾರ್ಯ ಕೈರಂಗಳ, ಕುಲಾಲ ಸಂಘದ ಮುಡಿಪು ಘಟಕ ಅಧ್ಯಕ್ಷ ಪುಂಡರೀಕಾಕ್ಷ ಕೈರಂಗಳ, ನಿವೃತ್ತ ಶಿಕ್ಷಕ ಇರಾ ಗೋಪಾಲ ಮಾಸ್ಟರ್, ಇರಾ ತೀಯಾ ಸಮಾಜದ ಅಧ್ಯಕ್ಷ ತನಿಯಪ್ಪ ಬೆಳ್ಚಾಡ ಇರಾ, ಸೂರಜ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ ರೇವಣ್ಕರ್, ಮಾಣಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯೆ ಮಂಜುಳಾ ಮಾವೆ, ಜೋಗಿ ಸಮಾಜದ ರುಕ್ಮಯ ಟೈಲರ್ ಕೈರಂಗಳ, ಅಬ್ಬಾಸ್ ಅಲಿ, ಶ್ರೀನಾಥ ಕೊಂಡೆ, ಕುರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವದಾಸ ಭಂಡಾರಿ ಕುರ್ನಾಡು, ಉದ್ಯಮಿ, ರಮೇಶ್ ಶೇಣವ, ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಪದ್ಮನಾಭ ನರಿಂಗಾನ, ತಾಲೂಕು ಪಂಚಾಯತ್ ಸದಸ್ಯ ಹೈದರ್ ಕೈರಂಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ ಹಾಗೂ ಶಿಕ್ಷಕಿ ಶಾರದಾ ಉಪಸ್ಥಿತರಿದ್ದರು.