Karavali
ಮಂಗಳೂರು : 'ಲಾಠಿಗೆ ಕೆಲಸವಿಲ್ಲ, ಮೈಕ್ ನಮ್ಮ ಆಯುಧ' - ದಾಯ್ಜಿವರ್ಲ್ಡ್ ವಿಶೇಷ ಸಂದರ್ಶನದಲ್ಲಿ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ
- Sun, Apr 19 2020 01:30:25 PM
-
ಮಂಗಳೂರು, ಎ.19 (Daijiworld News/MB) : ದಾಯ್ಜಿವರ್ಲ್ಡ್ ವಾಹಿನಿಯಲ್ಲಿ ಪ್ರಧಾನ ಸಂಪಾದಕ ವಾಲ್ಟರ್ ನಂದಳಿಕೆಯವರು ನಡೆಸಿದ ಲಾಕ್ಡೌನ್ ಎಕ್ಸ್ಕ್ಲೂಸಿವ್ ವಿಶೇಷ ಸಂದರ್ಶನದ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ಮಾತನಾಡಿದರು.
ಪ್ರಶ್ನೆ. ಲಾಕ್ಡೌನ್ನ ಮೊದಲ ದಿನದಿಂದ ಪೊಲೀಸರ ಪಾತ್ರಕ್ಕೆ ಮೆಚ್ಚುಗೆಗಳು ಬರುತ್ತಿದೆ ಅದು ಹೇಗೆ ಸಾಧ್ಯವಾಯಿತು ?
ಉತ್ತರ : ಇದು ಎರಡು ರೀತಿಯಾಗಿ ಸಾಧ್ಯವಾಗಿದೆ. ಮೊದಲ ದಿನವೇ ನಮ್ಮ ಎಲ್ಲಾ ತಂಡವನ್ನು ಕರೆದು ಇದು ಸಾಮಾನ್ಯ ಬಂದೋಬಸ್ತ್ ಅಲ್ಲ. ಈ ಸಂದರ್ಭದಲ್ಲಿ ಎಲ್ಲರೂ ಸಂಕಷ್ಟದಲ್ಲಿ ಇದ್ದಾರೆ. ಕೆಲವೊಂದು ಬಾರಿ ನಾವು ಅತೀ ಉತ್ಸೂಕರಾಗಿ ನಿಯಮಗಳನ್ನು ಜಾರಿಗೆ ತರಲು ಕಾರ್ಯ ನಿರ್ವಹಿಸುತ್ತೇವೆ. ಆದರೆ ನಾವು ಸಹನೆ, ತಾಳ್ಮೆಯಿಂದ ಇರುವುದು ಅತೀ ಮುಖ್ಯ ಎಂದು ತಿಳಿಸಲಾಯಿತು. ಯಾಕೆಂದರೆ ಈ ಸಂದರ್ಭದಲ್ಲಿ ಎಲ್ಲರಿಗೂ ಕಳವಳವಿದೆ. ಸರ್ಕಾರ ಯಾಕಾಗಿ ಈ ನಿರ್ಬಂಧವನ್ನು ಹಾಕಿದೆ ಎಂದು ಯಾರಿಗೂ ಅರ್ಥವಾಗಿಲ್ಲ. ಹಾಗಾಗಿ ನಮ್ಮ ಎಲ್ಲಾ ತಂಡಕ್ಕೆ ತಿಳುವಳಿಕೆ ನೀಡಲಾಯಿತು.
ಎರಡನೆಯದಾಗಿ ಈ ಸಂದರ್ಭದಲ್ಲಿ ನಮ್ಮ ತಂಡ ಯಾವ ರೀತಿಯಾಗಿ ವ್ಯವಹರಿಸಬೇಕು ಎಂಬುದನ್ನು ವೈಜ್ಞಾನಿಕವಾಗಿ ಅವರಿಗೆ ತಿಳಿಸಲಾಯಿತು. ನಾವು ಸಾಮಾನ್ಯವಾಗಿ ವೈದ್ಯರು, ಆರೋಗ್ಯ ಸಿಬ್ಬಂದಿಗಳು, ಆಂಬ್ಯುಲೆನ್ಸ್ ಚಾಲಕರು ಮೊದಲಾದವರುಗಳು ಯಾರನ್ನು ಫ್ರಂಟ್ ಲೈನ್ ಎಂದು ಕರೆಯುತ್ತೇವೆ ಅವರಲ್ಲಿ ಪ್ರಂಟ್ಲೈನ್ ಪೊಲೀಸರು. ಇವರೆಲ್ಲರ ಸಾಲಿನಲ್ಲಿ ಮೊದಲಿಗ ಪೊಲೀಸ್ ಸಿಬ್ಬಂದಿ. ಆ ನಿಟ್ಟಿನಲ್ಲಿ ಅವರಿಗೆ ಬಹಳ ಸ್ಪಷ್ಟವಾಗಿ ತಿಳಿಹೇಳಲಾಯಿತು. ಹಾಗೆಯೇ ಸಾರ್ವಜನಿಕರು ಸ್ಪಂದಿಸಿದ್ದರಿಂದ ನಾವು ಸರಿಯಾದ ರೀತಿಯಲ್ಲಿ ಲಾಕ್ಡೌನ್ ಜಾರಿ ಮಾಡಲು ಸಾಧ್ಯವಾಯಿತು. ಜನರಿಗೆ ಅವರ ಹಿತಾಸಕ್ತಿಯಿಂದಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದಿದೆ. ಜನರಲ್ಲಿ ಯಾವ ರೀತಿಯಾಗಿ ವ್ಯವಹರಿಸಬೇಕು ಪೊಲೀಸರಿಗೂ ಗೊತ್ತು. ಹಾಗಾಗಿ ಇದೊಂದು ಬಹಳ ಸಾಮರಸ್ಯದಿಂದ ಹಾಗೂ ಅಷ್ಟೇ ಬಿಗುವಿನಿಂದ ಮುಂದುವರೆದಿದೆ. ಲಾಕ್ಡೌನ್ ಮುಂದುವರೆದಿರುವ ಈ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರ ಅತೀ ಮುಖ್ಯ ಎಂದು ಹೇಳಿದರು.
ಪ್ರ : ಆರಂಭದಲ್ಲಿ ಸ್ಪಷ್ಟತೆಯ ಕೊರತೆ ಇತ್ತು. ನಿರ್ಧಾರವು ಬದಲಾಗುತ್ತಿತ್ತು. ನೀವು ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪಲು ಪ್ರಯತ್ನಿಸಿದ್ದೀರಿ. ಸ್ಪಷ್ಟತೆಯ ಕೊರತೆಯ ಹಿಂದಿನ ಕಾರಣವೇನು?
ಉತ್ತರ : ಆರಂಭದಲ್ಲಿ ಇದು ಎಲ್ಲರಿಗೂ ಕಲಿಕೆ. ಮತ್ತೆ ಜಾಗತಿಕವಾಗಿ ಯಾವ ರೀತಿ ಕೊರೊನಾ ವಿರುದ್ಧದ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ನೋಡಿ ಎಲ್ಲಾ ಕಡೆಗಳಲ್ಲಿ ತಿದ್ದುಪಡಿ ಮಾಡಲಾಗುತ್ತಿತ್ತು. ಮಾಸ್ಕ್ ಬೇಕಾ ಬೇಡ್ವ, ಲಾಕ್ಡೌನ್ ವೈಜ್ಞಾನಿಕವೋ, ಯಾವ ರೀತಿ ಲಾಕ್ಡೌನ್ ಆಗಬೇಕು, ಕಂಟೋನ್ಮೆಂಟ್ ಎಂದರೆ ಏನು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ನಾವು ಕೂಡಾ ಈ ಕುರಿತಾಗಿ ತಿಳಿಯಬೇಕಾಗಿತ್ತು. ಇದೆಲ್ಲಾ ಬಹಳ ಸ್ಪಷ್ಟವಾಗಲು ಸಮಯ ಬೇಕಾಯಿತು. ಆ ಬಳಿಕ ಜಿಲ್ಲಾಡಳಿತ ನಾವು ಒಂದು ತಂಡವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಹಾಗೆಯೇ ಜನಪ್ರತಿನಿಧಿಗಳು, ಮಾಧ್ಯಮ, ಸಾರ್ವಜನಿಕ ಸಂಘ - ಸಂಸ್ಥೆಗಳು, ಸಾರ್ವಜನಿಕರು ಎಲ್ಲರೂ ಒಂದು ಉದ್ದೇಶದಿಂದ ಏಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಪ್ರಶ್ನೆ : ಇತರ ಹಲವೆಡೆ ಪೊಲೀಸರು ಲಾಠಿಗೆ ಕೆಲಸ ನೀಡಿದ್ದಾರೆ. ಆದರೆ ಮಂಗಳೂರಿನಲ್ಲಿ ಅಂತಹ ಯಾವುದೇ ಘಟನೆಗಳು ನಡೆದಿಲ್ಲ.
ಉತ್ತರ : ಮೊದಲನೆಯದಾಗಿ ಈ ಸಂದರ್ಭದಲ್ಲಿ ಲಾಠಿಗೆ ಕೆಲಸವೇ ಇಲ್ಲ ಎಂಬುದಾಗಿ ನಾವು ಸ್ಪಷ್ಟವಾಗಿ ತಿಳಿಸಿದ್ದೇವೆ. ಮೈಕ್ ನಿಮ್ಮ ಆಯುಧ, ಮೈಕ್ ಮೂಲಕ ಜನರಿಗೆ ತಿಳಿ ಹೇಳಬಹುದು. ಇದರ ಆಚೆಗೆ ನಾವು ಏನು ಮಾಡುವಂತಿಲ್ಲ. ಮಾಡುವ ಅವಶ್ಯಕತೆಯೂ ಇಲ್ಲ ಎಂದು ತಿಳಿಸಿದ್ದೇವೆ. ಎರಡನೆಯದಾಗಿ ನಾವು ಎಲ್ಲಾ ಧರ್ಮ ಮುಖಂಡರಲ್ಲಿ ತಿಳಿಸಿದೆವು. ಎಲ್ಲಾ ಅಪಾರ್ಟ್ಮೆಂಟ್ಗಳಿಗೆ ತಿಳಿಸಿದೆವು. ಮೈಕ್ಗಳಲ್ಲಿ ಅನೌನ್ಸ್ ಮಾಡಿದೆವು. ಜನರು ಅದಕ್ಕೆ ಸರಿಯಾಗಿ ಸ್ಪಂದನೆ ನೀಡಿದ್ದಾರೆ. ಇವೆಲ್ಲವೂ ನಮಗೆ ಸಹಕಾರಿಯಾಯಿತು. ಆದರೆ ಕೆಲವು ಕಡೆ ಜನರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಪೊಲೀಸರು ಹೊಡೆಯಲ್ಲ ಎಂದು ಹೊರಬರಲು ಆರಂಭಿಸಿದರು. ಈ ಸಂದರ್ಭದಲ್ಲಿ ನಾವು ವಾಹನಗಳನ್ನು ಮುಟ್ಟುಗೋಲು ಹಾಕುವ ಕ್ರಮವನ್ನು ಕೈಗೆತ್ತಿಕೊಂಡೆವು. ನಗರದಲ್ಲಿ ಅತೀ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದೇವೆ. ಗುರವಾರವರೆಗೂ ಸುಮಾರು 2600 ವಾಹನಗಳನ್ನು ವಶಕ್ಕೆ ಪಡೆದಿದ್ದೇವೆ. ಜನರಿಗೆ ಹೊಡೆದು ಬಡಿದು ಒಳ ಕೂರಿಸುವುದಕ್ಕಿಂತ ಇದು ಒಳ್ಳೆಯದು. ಹೆಚ್ಚಿನ ಜನರು ನಾವು ಹೊರಗೆ ಬರಬಾರದಿತ್ತು. ನಾವು ಮಾಡಿದ್ದು ತಪ್ಪು ಎಂದು ಹೇಳಿದ್ದಾರೆ.
ವಲಸೆ ಕಾರ್ಮಿಕರು ಅವರಿಗೆ ಯಾವುದೇ ವಸತಿ ಇಲ್ಲ. ಉದ್ಯೋಗ ನೀಡಿದವರು ಅವರನ್ನು ಸರಿಯಾಗಿ ನೋಡಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಹಾಗಾಗಿ ನಾವು ಜಿಲ್ಲಾಡಳಿದೊಂದಿಗೆ ಸೇರಿ ಕೆಲವೊಂದು ಪ್ರದೇಶಗಳಲ್ಲಿ ಇಂತಹ ವಲಸಿಗರಿಗೆ ವ್ಯವಸ್ಥೆ ಮಾಡಿದೆವು.
ಪ್ರಶ್ನೆ : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿರಿಯ ನಾಗರಿಕನ ವಿಡಿಯೋದಲ್ಲಿ ಪೊಲೀಸರ ಪಾತ್ರದ ಬಗ್ಗೆ ನಿಮ್ಮ ಗಮನಕ್ಕೆ ಬಂದಿದೆಯೇ?
ಉತ್ತರ : ಅವರಿಗೆ ಆರೋಗ್ಯದ ಸಮಸ್ಯೆಯಿದೆ ಎಂಬುದಾಗಿ ತಿಳಿದು ಬಂದಿದೆ. ವಿಡಿಯೋವನ್ನು ನೋಡಿದಾಗ ತಿಳಿದು ಬರುತ್ತದೆ ಯಾವುದೇ ಪೊಲೀಸ್ ಸಿಬ್ಬಂದಿಗಳು ಆ ವ್ಯಕ್ತಿಗೆ ದೈಹಿಕವಾಗಿ ಹಲ್ಲೆ ಮಾಡಿಲ್ಲ. ಪಾಸ್ ನೀಡುವಂತೆ ಮಾತ್ರ ಹೇಳಿದ್ದಾರೆ. ಬಹಳ ತಾಳ್ಮೆಯಿಂದ ವರ್ತನೆ ಮಾಡಿದ್ದಾರೆ. ಆ ಹಿರಿಯ ನಾಗರಿಕ ವ್ಯಕ್ತಿಯನ್ನು ಪೊಲೀಸ್ ವಶಕ್ಕೆ ಪಡೆದಿಲ್ಲ. ಆದರೆ ಪೊಲೀಸರಿಗೆ ಅವ್ಯಾಚವಾಗಿ ನಿಂದನೆ ಮಾಡುವುದು ಸರಿಯಲ್ಲ. ಈ ರೀತಿ ತೊಂದರೆಗಳು ಇರುವ ಹಿರಿಯ ನಾಗರಿಕರನ್ನು ಕುಟುಂಬದ ವ್ಯಕ್ತಿಗಳು ಹೊರಬರದಂತೆ ನೋಡಿಕೊಳ್ಳಬೇಕು. ಅದರಿಂದಾಗಿ ದೊಡ್ಡ ದುರಂತಕ್ಕೂ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ಹಿರಿಯ ನಾಗರಿಕರ ಮೇಲೆ ನಮಗೆ ಕರುಣೆಯಿದೆ. ಆ ಕಾರಣದಿಂದಾಗಿ ಅವರನ್ನು ನಾವು ಬಂಧನ ಮಾಡಲಿಲ್ಲ. ಹಿರಿಯ ನಾಗರಿಕರಿಗೆ ಅವರ ಕುಟುಂಬವಾಗಲಿ ಅಥವಾ ನೆರೆಹೊರೆಯವರಾಗಲಿ ಸಹಾಯ ಮಾಡಬೇಕು.
ಪ್ರಶ್ನೆ: ಅಪರಾಧ ಪ್ರಕರಣಗಳು ಕಡಿಮೆಯಾಗಿದೆಯೇ?
ಉತ್ತರ : ಲಾಕ್ಡೌನ್ನಿಂದಾಗಿ ಅಪರಾಧ, ಅತ್ಯಾಚಾರ ಪ್ರಕರಣದ ಇಳಿಮುಖವಾದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶೇ.80 ರಷ್ಟು ಇಳಿಮುಖವಾಗಿದೆ. ಅಪಘಾತ ಪ್ರಕರಣವೂ ಕಡಿಮೆಯಾಗಿದೆ. ಯಾರೆ ಹೊರಬಂದರೆ ಅವರನ್ನು ತಪಾಸಣೆ ಮಾಡಲಾಗುತ್ತದೆ. ಈ ಕಾರಣದಿಂದಾಗಿ ಕಳ್ಳರು, ಡ್ರಗ್ ಮೊದಲಾದ ಮಾಫಿಯಾ ನಡೆಸುವವರು ಹೊರಬರಲು ಆಗುತ್ತಿಲ್ಲ. ಜನರು ಮನೆಯಲ್ಲೇ ಇರುವುದರಿಂದ ಮನೆಯಲ್ಲಿ ಕಳ್ಳತನ ಮಾಡಲು ಆಗುತ್ತಿಲ್ಲ. ಹಾಗಾಗಿ ಹೆಚ್ಚಿನ ಅಪರಾಧ ಪ್ರಕರಣಗಳು ನಡೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ದೂರದಲ್ಲಿ ಇರುವವರ ಮನೆ ದರೋಡೆಯಾಗಿದ್ದಲ್ಲಿ ವರದಿಯಾದ ಬಳಿಕವೇ ತಿಳಿದು ಬರಬಹುದು.
ಪ್ರಶ್ನೆ: ಅಪರಾಧ ಪ್ರಕರಣಗಳು ಕಡಿಮೆಯಾಗಿದೆ. ಆದರೆ ಇದೇ ಸಂದರ್ಭದಲ್ಲಿ ಆನ್ಲೈನ್ ವಂಚನೆಗಳು ಹೆಚ್ಚಾಗಿದೆ. ಇದು ನಿಮ್ಮ ಗಮನಕ್ಕೆ ಬಂದಿದೆಯೇ?
ಉತ್ತರ : ಜನರು ಹೆಚ್ಚಾಗಿ ಅಂತರ್ಜಾಲ ಮತ್ತು ಆನ್ಲೈನ್ ವಾಣಿಜ್ಯವನ್ನು ಹೆಚ್ಚಾಗಿ ಅವಲಂಭಿಸಿದ್ದಾರೆ. ಖಂಡಿತವಾಗಿಯೂ ಕಿಡಿಗೇಡಿತನಗಳು ನಡೆಯುತ್ತಿವೆ, ಅದರಲ್ಲೂ ಮುಖ್ಯವಾಗಿ ನಾವು ಈಗ ಕೊರೊನಾ ಕುರಿತಾಗಿ ತಪ್ಪು ಮಾಹಿತಿ, ಸರ್ಕಾರದ ಮಾರ್ಗಸೂಚಿಗಳ ವಿರುದ್ಧವಾಗಿ ಸುಳ್ಳು ಸುದ್ದಿ ಹಬ್ಬುವುದು. ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಹರಡುವುದನ್ನು ತಡೆಗಟ್ಟುವಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ.
ಪ್ರಶ್ನೆ: ಜನರ ಸಹಕಾರದ ಬಗ್ಗೆ ನಿಮಗೆ ತೃಪ್ತಿ ಇದೆಯೇ?
ಉತ್ತರ : ಲಾಕ್ಡೌನ್ಗೆ ಹೆಚ್ಚಿನ ಜನರು ಸಹಕಾರ ನೀಡಿದ್ದಾರೆ. ಲಕ್ಷದಲ್ಲಿ 100 ಜನರು ಉಲ್ಲಂಘನೆ ಮಾಡುತ್ತಿದ್ದಾರೆ. ಅವರಿಂದಾಗಿ ಎಲ್ಲರಿಗೂ ತೊಂದರೆಯಾಗುತ್ತದೆ. ಈ 100 ಜನರ ಪೈಕಿ 10 ಜನರಿಗೆ ಕೊರೊನಾ ಪಾಸಿಟಿವ್ ಇದ್ದರೂ ಎಲ್ಲರಿಗೂ ತೊಂದರೆ ಉಂಟಾಗ ಬಹುದು. ತಾವೆಲ್ಲರೂ ನಿಮ್ಮ ಆರೋಗ್ಯ, ನಿಮ್ಮ ಕುಟುಂಬ, ತಮ್ಮ ಸಮಾಜದ ಹಿತದೃಷ್ಟಿಯಿಂದಾಗಿ ಮನೆಯಲ್ಲೇ ಇರಬೇಕು. ನಾವು ಈ ಕೊರೊನಾದ ಸರಪಳಿಯನ್ನು ತುಂಡರಿಸದಿದ್ದಲ್ಲಿ ಅದು ಹರಡುತ್ತಲ್ಲೇ ಹೋಗುತ್ತದೆ. ಇದರಿಂದಾಗಿ ನಮ್ಮ ದೇಶ, ದೇಶದ ಆರ್ಥಿಕತೆಗೆ ಬಹಳ ಪರಿಣಾಮ ಬೀರುತ್ತದೆ. ಎಲ್ಲಾ ಆಯಾಮಗಳಿಂದ ಆಲೋಚನೆ ಮಾಡುವುದು ಅತೀ ಮುಖ್ಯ. ಇದಷ್ಟೇ ನಾವು ನಮ್ಮ ದೇಶಕ್ಕೆ ಮಾಡಬಹುದಾದ ಸಣ್ಣ ಸಹಕಾರ. ತಮ್ಮನ್ನು ತಾವು ಸೂಪರ್ ಪವರ್ ಎಂದು ತಿಳಿದು ಕೊಂಡಿದ್ದ ದೇಶಗಳು ಕೊರೊನಾದಿಂದಾಗಿ ಸಂಕಷ್ಟದಲ್ಲಿದೆ. ಹಾಗಾಗಿ ನಾವು ಈ ಸಾಂಕ್ರಮಿಕವನ್ನು ತಡೆಗಟ್ಟಲು ಎಲ್ಲಾ ರೀತಿಯಲ್ಲಿ ಸಹಕರಿಸಬೇಕು. ಎಲ್ಲರೂ ಸರಪಳಿಯನ್ನು ಮುರಿಯಬೇಕು.
ಪ್ರಶ್ನೆ : ಮಂಗಳೂರಿನಲ್ಲಿ 13 ದಿನದಿಂದ ಯಾವುದೇ ಪಾಸಿಟಿವ್ ಪ್ರಕರಣಗಳು ಇಲ್ಲ. ಹಾಗಾಗಿ ಎಪ್ರಿಲ್ 20 ರ ಬಳಿಕ ಲಾಕ್ಡೌನ್ ಸಡಿಲಿಕೆಯಾಗುವ ಸಾಧ್ಯತೆಯಿದೆಯೇ?
ಉ: ಕೇಂದ್ರ ಸರ್ಕಾರವು ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮುಖ್ಯವಾಗಿ ಕೆಲವು ಕೃಷಿ ಚಟುವಟಿಕೆಗಳು, ನಿರ್ದಿಷ್ಟ ಕೈಗಾರಿಕೆಗಳನ್ನು ತೆರೆಯಲಾಗಿದೆ, ಏಪ್ರಿಲ್ 19 ರ ಸ್ಥಿತಿಗತಿಯ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಲಾಕ್ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿಲ್ಲ ಮೇ ಮೂರರವೆಗೆ ಲಾಕ್ಡೌನ್ ಮುಂದುವರೆಸಲಾಗಿದೆ. ಎಪ್ರಿಲ್ 19 ರ ಸ್ಥಿತಿಗತಿ ನೋಡಿ ಸಣ್ಣ ಪ್ರಮಾಣದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ಸಾಧ್ಯತೆಯಿದೆ.
ಪ್ರಶ್ನೆ: ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ ಕಾಸರಗೋಡು ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ, ಮಂಗಳೂರು ಉಡುಪಿ ಗಡಿಯ ಬಗ್ಗೆ ಏನು? ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸಲು ಕಾರ್ಯವಿಧಾನ ಏನು?
ಉ: ತುರ್ತು ಸಂದರ್ಭದಲ್ಲಿ ಮತ್ತು ಅಗತ್ಯ ಸೇವೆಗಳನ್ನು ಅನುಮತಿಸಲು ಅದೇ ಕಾರ್ಯವಿಧಾನ ವನ್ನು ಅನುಸರಿಸಲಾಗಿದೆ. ಜಿಲ್ಲೆಗೆ ಪ್ರವೇಶಿಸುವ ಮೊದಲು ಚಾಲಕ ಮತ್ತು ಸಿಬ್ಬಂದಿಯನ್ನು ಪರೀಕ್ಷಿಸಲಾಗುವುದು. ಕಾರ್ಯವಿಧಾನ ಪ್ರಕಾರ ರೋಗಿಯನ್ನು ಇಲ್ಲಿಗೆ ಬರಲು ಡಿಹೆಚ್ಒ ಅವರಿಂದ ಕೊರೊನಾ ಇಲ್ಲವೆಂದು ಪ್ರಮಾಣಿಕರಿಸುವ ಪತ್ರ ಪಡೆದಿರಬೇಕು. ಸಾವಿನ ಸಂದರ್ಭದಲ್ಲಿ ಮಾತ್ರ ಮಂಗಳೂರಿನಿಂದ ಉಡುಪಿಗೆ ಹೋಗಲು ಡಿಸಿ, ಡಿಸಿಪಿ ಮತ್ತು ಪೊಲೀಸ್ ಕಮಿಷನರ್ಗೆ ಮರಣ ಪತ್ರ ನೀಡಿದರೆ ಅವರು ಕಾರಣ ನಿಜವೇ ಎಂದು ಪರಿಶೀಲಿಸುತ್ತಾರೆ ಬಳಿಕ ಅಂತರ ಜಿಲ್ಲಾ ಪಾಸ್ ನೀಡುತ್ತಾರೆ. ಇನ್ನು ಕೆಲವೊಂದು ಗಂಭೀರ ವೈದ್ಯಕೀಯ ತುರ್ತುಸ್ಥಿತಿಯಲ್ಲಿ ಆ ಜಿಲ್ಲೆಯಲ್ಲಿ ಅಥವಾ ಈ ಜಿಲ್ಲೆಯಲ್ಲಿ ಅಗತ್ಯ ಚಿಕಿತ್ಸೆಗೆ ಸೌಲಭ್ಯಗಳು ಇಲ್ಲದಿದ್ದಲ್ಲಿ ಪರಿಶೀಲನೆ ನಡೆಸಿ ಪಾಸ್ ನೀಡಲಾಗುವುದು.
ಪ್ರಶ್ನೆ: ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದೀರಿ. ಅದು ನಿಮಗೆ ಸಾರ್ವಜನಿಕರೊಂದಿಗೆ ಸಂವಹನ ನಡೆಸಲು ಸಹಾಯ ಮಾಡಿದೆ. ಆದರೆ ಈ ಸಂದರ್ಭ ಈ ಸಂದರ್ಭದಲ್ಲಿ ಅದು ನಿಮಗೆ ಹೇಗೆ ಸಹಾಯ ಮಾಡಿದೆ?
ಉ : ನಾವು ಎಲ್ಲಿಯೂ ಗುಂಪು ಸೇರೆದಂತೆ ನೋಡಿಕೊಳ್ಳುತ್ತೇವೆ. ಹಾಗಾಗಿ ಕಚೇರಿ ಸಂದರ್ಶಕರು ಕಡಿಮೆ. ನಾವು ಕೆಲವೊಂದು ಅಗತ್ಯ ವಿಷಯಗಳು ಇದ್ದಲ್ಲಿ ಮಾತ್ರ ಪ್ರದೇಶಗಳಿಗೆ ಭೇಟಿ ನೀಡುತ್ತೇವೆ. ನಾವು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಿಲ್ಲ. 40,000 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಸಾರ್ವಜನಿಕರೊಂದಿಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಲು ಸಹಾಯ ಮಾಡಿದೆ.
ಪ್ರಶ್ನೆ: ಪಾಸ್ ಪಡೆಯಲು ಅವಶ್ಯಕತೆಗಳು ಯಾವುದು, ವಿಶೇಷವಾಗಿ ಅಗತ್ಯವಿರುವವರಿಗೆ ಸಹಾಯಕ್ಕಾಗಿ ತಲುಪುವ ಸ್ವಯಂಸೇವಕರು ಅರ್ಹರೇ?
ಉ: ಜಿಲ್ಲಾಧಿಕಾರಿ ಅಥವಾ ಸಹಾಯಕ ಆಯುಕ್ತರು ಪಾಸ್ ನೀಡುತ್ತಾರೆ. ಸಾವು ಅಥವಾ ಗಂಭೀರ ವೈದ್ಯಕೀಯ ಕಾರಣಗಳಿದ್ದಾಗ ಪೊಲೀಸರು ಈ ಪ್ರಕರಣದಲ್ಲಿ ಸಹಾಯ ಮಾಡುತ್ತಾರೆ. ಅರ್ಹತೆಗಳ ಆಧಾರದ ಮೇಲೆ ಪಾಸ್ ನೀಡುತ್ತಾರೆ.
ಪ್ರಶ್ನೆ: ಐಪಿಎಸ್ ಜೊತೆಗೆ, ಮೂಲತಃ ನೀವು ವೈದ್ಯಕೀಯ ವೈದ್ಯರು. ವೈದ್ಯರಾಗಿ ನೀವು ಕೊರೊನಾ ಭವಿಷ್ಯದ ಬಗ್ಗೆ ಏನು ಹೇಳಬೇಕೆಂದು ಬಯಸುತ್ತೀರಿ, ಯಾವುದೇ ಸಕಾರಾತ್ಮಕ ಚಿಂತನೆ ಇದೆಯೇ?
ಉ: ಪ್ರಪಂಚವು ಅನೇಕ ರೀತಿಯ ವೈರಸ್ಗಳಿಂದ ಬದುಕುಳಿದಿದೆ, ಆದರೆ ಕೊರೊನಾವನ್ನು ನಾವು ಅದೇ ರೀತಿ ಎಂದು ಬಾವಿಸಲು ಸಾಧ್ಯವಿಲ್ಲ. ಕೊರೊನಾ ಜಗತ್ತನ್ನೇ ನಾಶ ಮಾಡುತ್ತದೆ ಎಂದು ಭಾವಿಸಬೇಕಾಗಿಲ್ಲ. ಕೈ ಗಳನ್ನು ಸ್ವಚ್ಛವಾಗಿಡುವುದು ಇದರಲ್ಲಿ ಮುಖ್ಯವಾದದ್ದು. ಮುಖವನ್ನು ಮುಟ್ಟಬೇಡಿ, ಮುಖವಾಡ ಧರಿಸಿ ಮನೆಯಲ್ಲಿ ತಯಾರಿಸಿದ ಮುಖವಾಡ ಕೂಡ ಪರಿಣಾಮಕಾರಿಯಾಗಿದೆ. ದೂರವಿರಿ, ಸರಪಳಿಯನ್ನು ಮುರಿಯಿರಿ, ಜವಾಬ್ದಾರಿಯುತವಾಗಿ ವರ್ತಿಸಿ, ಒಂದು ರಾಷ್ಟ್ರವಾಗಿ ಅದನ್ನು ನಿಭಾಯಿಸಲು ಶಕ್ತಿ ಇರಲಿ. ಕೊರೊನಾ ವಿರುದ್ಧ ನಾವು ಗೆಲ್ಲಲು ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸೋಣ.