ಮಂಗಳೂರು, ಮಾ 06 : ರುದಿರಾ ಫಿಲ್ಮ್ಸ್ ಬ್ಯಾನರ್ನಡಿ , ಕರಾವಳಿಗರ ಪ್ರಯತ್ನದ ‘ನಿಲುಕದ ನಕ್ಷತ್ರ’ ಕನ್ನಡ ಚಿತ್ರದ ಶೂಟಿಂಗ್ ಸಂಪೂರ್ಣಗೊಂಡಿದ್ದು, ಇದೀಗ ಬಿಡುಗಡೆಗಾಗಿ ಕಾಯುತ್ತಿದೆ. ವಿಭಿನ್ನ ಕಥಾಹಂದರ ಹೊಂದಿರುವ, ನೈಜ ನಿರೂಪಣೆಯೊಂದಿಗೆ ಹೊಸತನವಿರುವ ಈ ಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರ ಮನ ಮುಟ್ಟಲಿದೆ ಎನ್ನುವುದು ಚಿತ್ರತಂಡದ ಮಾತು.
ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಸಮಾಜದ ವಾಸ್ತವತೆಯನ್ನು ತೋರಿಸಲಿರುವ ಚಿತ್ರ ‘ನಿಲುಕದ ನಕ್ಷತ್ರ’ದಲ್ಲಿ ಹೊಸ ಪ್ರತಿಭೆಗಳೆ ಅಭಿನಯಿಸಿರುವ ಈ ಚಿತ್ರಕ್ಕೆ ಆನಂದ್ ಅನಿ ಬೆಂಗಳೂರು, ವಿನ್ಸೆಂಟ್ ಡಿ ಸೋಜ ಹಾಗೂ ಸುಶಾನ್ ರೈ ಮಾವಿನಕಟ್ಟೆ ನಿರ್ಮಾಪಕರಾಗಿದ್ದು, ಧನರಾಜ್ ಶೆಟ್ಟಿ ಮತ್ತು ಪ್ರಸನ್ನ ಎಸ್ ಬಲ್ಮಠ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ 6 ಹಾಡುಗಳಿದ್ದು, ಸಾಹಿತ್ಯವನ್ನು ಗಣಿ ದೇವ್ ಕಾರ್ಕಳ ಹಾಗೂ ದೀಪಕ್ ಶೆಟ್ಟಿ ರಚಿಸಿದ್ದಾರೆ. ಸಂಗೀತದ ಜೊತೆಗೆ ಚಿತ್ರ ಕಥೆ ಹಾಗೂ ನಿರ್ದೇಶನವನ್ನು ಸ್ವತಃ ಗಣಿ ದೇವ್ ನಿರ್ವಹಿಸಿದ್ದಾರೆ. ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡ ಚಿತ್ರದ ಛಾಯಾಗ್ರಹಕರಾಗಿ ಸುರೇಂದ್ರ ಪಣಿಯೂರು ಕಾರ್ಯನಿರ್ವಹಿಸಿದ್ದಾರೆ.
ತಾರಾಗಣದಲ್ಲಿ ಪವನ್ ಆರ್ಯ, ಸುಶ್ಮಿತಾ ರೈ, ಅಭಿಲಾಶ್ ಕುಲಾಲ್, ಪ್ರಜನ್ ರೈ, ಅಭಿನೇತ್ರಿ ಜೈನ್, ಸ್ವಾತಿ ಶೆಟ್ಟಿ, ಯತೀಶ್ ಹಾಗೂ ಶರಣ್ ಅಭಿನಯಿಸಿದ್ದು ಸಹಾಯಕ ನಿರ್ದೇಶಕರಾಗಿ ಸುಶಾನ್ ರೈ ಮಾವಿನಕಟ್ಟೆ ಹಾಗೂ ಕಾರ್ಯಕಾರಿ ನಿರ್ದೇಶಕರಾಗಿ ಕವಿತಾ ಕನ್ನಿಕಾ ಪೂಜಾರಿ ಹಾಗೂ ಕಿಶನ್ ರೈ ಮಡಿಕೇರಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಬಹುಪಾಲು ಚಿತ್ರೀಕರಣವು ಕರಾವಳಿಯ ಸುಂದರ ಭಾಗಗಳು ಹಾಗೂ ಬೆಂಗಳೂರಿನಲ್ಲಿ ನಡೆದಿದ್ದು ಚಿತ್ರದ ಗುಣಮಟ್ಟದಲ್ಲಿ ರಾಜಿಯಾಗದ ಚಿತ್ರತಂಡ ಉನ್ನತ ಮಟ್ಟದ ತಂತ್ರಜ್ಞಾನ ಬಳಸಿಕೊಂಡಿದೆ ಹಾಗೂ ಗ್ರೀನ್ ಸ್ಕ್ರೀನ್ ವಿಎಫ್ಎಕ್ಸ್ ಕೂಡ ಬಳಸಿದೆ.