ಮಂಗಳೂರು, ಎ.19 (Daijiworld News/MB) : ಉಸಿರಾಟದ ತೊಂದರೆಯಿಂದ ದಾಖಲಾಗಿ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆಗೆ ಕೊರೊನಾವಿರುವುದು ದೃಢಪಟ್ಟಿದ್ದು ಕೊರೊನಾಗೆ ದ.ಕ. ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ 50 ವರ್ಷದ ಮಹಿಳೆ ಉಸಿರಾಟದ ತೊಂದರೆಯಿಂದ ಬಂಟ್ವಾಳ ತಾಲೂಕು ಆಸ್ಪತ್ರೆಗೆ ತೆರಳಿದ್ದರು. ಶನಿವಾರ ಅಲ್ಲಿಂದ ವೆನ್ಲಾಕ್ನಲ್ಲಿರುವ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಭಾನುವಾರ ಬೆಳಿಗ್ಗೆ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದು ಗಂಟಲ ದ್ರವದ ಮಾದರಿಯನ್ನು ಶನಿವಾರವೇ ಪರೀಕ್ಷೆಗೆ ಕಳುಹಿಸಲಾಗಿದೆ. ಇದೀಗ ಪರೀಕ್ಷೆಯ ವರದಿ ಬಂದಿದ್ದು ಕೊರೊನಾವಿರುವುದು ದೃಢಪಟ್ಟಿದೆ.
ಮೃತ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟ ಕಾರಣದಿಂದಾಗಿ ಮೃತರ ಪತಿ, ಮಗ, ಅತ್ತೆಗೆ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು ಅತ್ತೆಯ ಸ್ಥಿತಿ ಗಂಭೀರವಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂವರ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಮೃತ ಮಹಿಳೆಯ ಪುತ್ರ ಮಾ.16 ರಂದು ದುಬೈನಿಂದ ಬಂದಿದ್ದು ಬಂಟ್ವಾಳದಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗಿದೆ.
ಇನ್ನು ಈ ಮೃತ ಮಹಿಳೆಗೆ ಕೊರೊನಾ ದೃಢಪಟ್ಟಿರುವ ಹಿನ್ನಲೆಯಲ್ಲಿ ಶವ ಸಂಸ್ಕಾರ ವೈದ್ಯಕೀಯ ಶಿಷ್ಟಾಚಾರದಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ನಡೆಯಲಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ದತೆ ನಡೆಸಿದೆ.