ಮಂಗಳೂರು, ಮಾ 06 : ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕೋಮುಗಳ ಬಗ್ಗೆ ಹೇಳಿಕೆ ನೀಡುತ್ತಾ ಜನರ ದಾರಿ ತಪ್ಪಿಸುತ್ತಿದೆ, ವಿನಾಃ ರಾಜ್ಯದ ಅಭಿವೃದ್ದಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದ್ದಾರೆ. ಅವರು ಮಾ 06 ರ ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ಬಿಜೆಪಿಯ ಚುನಾವಣಾ ಕಾರ್ಯತಂತ್ರ ರಾಜ್ಯದಲ್ಲಿ ನಡೆದಂತಹ ಕೊಲೆಗಳ ಮೇಲೆ ಆಧಾರಿತವಾಗಿದೆ. ರಾಜ್ಯದಲ್ಲಿ ನಡೆದಂತಹ ಪ್ರತಿ ಹಿಂದೂ ಕೊಲೆಗಳು ಕಾಂಗ್ರೆಸ್ ಪ್ರೋತ್ಸಾಹದಿಂದ ನಡೆಯುತ್ತಿದೆ ಎಂದು ಆರೋಪಿಸುತ್ತಾರೆ, ಅದಕ್ಕೆ ಪ್ರತಿಯಾಗಿ ಇನ್ನೊಂದೆಡೆ ಗೃಹ ಸಚಿವರು ಹಿಂದುಗಳ ಜತೆಗೆ ಮುಸ್ಲಿಂರ ಕೊಲೆಗಳು ನಡೆದಿದೆ ಎಂದು ಪಟ್ಟಿ ಬಿಡುಗಡೆ ಮಾಡಿ ಒಲೈಕೆ ರಾಜಕಾರಣದಲ್ಲಿ ತೊಡಗುತ್ತಾರೆ ಎಂದರು.
ಕರಾವಳಿ ಪ್ರದೇಶದ ಅಭಿವೃದ್ಧಿಗಾಗಿ ಬಿಜೆಪಿಯಾಗಲಿ ಕಾಂಗ್ರೆಸ್ ಆಗಲಿ ಕೆಲಸ ಮಾಡಿಲ್ಲ. ಬದಲಾಗಿ ಕೋಮು ಹಿಂಸಾಚಾರವನ್ನು ಎರಡು ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ. ಮತೀಯ ಧ್ರುವೀಕರಣದೊಂದಿಗೆ ಮಾತ್ರ ಕರಾವಳಿ ಜಿಲ್ಲೆಗಳಲ್ಲಿ ರಾಜಕೀಯವನ್ನು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿಯ ಜನಸುರಕ್ಷಾ ಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಕುಮಾರಸ್ವಾಮಿ , ಜನರನ್ನು ಎದುರಿಸುವ ಸಮರ್ಥ ನಾಯಕರು ಬಿಜೆಪಿಯಲ್ಲಿಲ್ಲ ಹೀಗಾಗಿ ಅವರು ಪದೇ ಪದೇ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಯನ್ನು ರಾಜ್ಯಕ್ಕೆ ಕರೆಸುತ್ತಿದ್ದಾರೆ ಎಂದು ಕುಹಕವಾಡಿದರು.
ಬಿಜೆಪಿಯ ಜನ ಸುರಕ್ಷಾ ಯಾತ್ರೆ ಹೆಸರೇ ಆಕರ್ಷಕವಾಗಿದೆ. ಆದರೆ ಅವರ ಕಾರ್ಯಕ್ರಮಕ್ಕೆ ಈ ಹೆಸರು ಸೂಕ್ತವಲ್ಲ , ಕಾರಣ , ರಾಜ್ಯದ ಶಿಶುಗಳನ್ನು ರಕ್ಷಿಸುವ ಸಾಮರ್ಥ್ಯವಿಲ್ಲದ ವ್ಯಕ್ತಿ ಈ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಯೋಗಿ ಅವರ ರಾಜ್ಯದಲ್ಲಿ ಆಸ್ಪತ್ರೆಯಲ್ಲಿ ದಾಖಲಾದ ಮಕ್ಕಳನ್ನು ಉಳಿಸಲು ವಿಫಲವಾಗಿದ್ದಾರೆ, ಇನ್ನು ಅವರಿಂದ ಇಲ್ಲಿಯವರಿಗೆ ರಕ್ಷಣೆ ಬೇಕಾಗಿಲ್ಲ ಎಂದರು.
ಇನ್ನು ವಿಧಾನಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕಾಗಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಕುಮಾರ ಸ್ವಾಮಿ , ಜೆಡಿಎಸ್ ಎಂದಿಗೂ ಬೆಂಬಲಿಸುತ್ತೇವೆ ಎಂದು ಕಾಂಗ್ರೇಸ್ ಕಚೇರಿ ಬಳಿ ಹೋಗಿಲ್ಲ. ಬದಲಾಗಿ ಅವರೇ ರಾಜ್ಯದ ಅನೇಕ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬೆಂಬಲ ಬೇಡಿದ್ದಾರೆ. ನಾವು ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ವರ್ಧಿಸಿ ನಮ್ಮ ಸಾಮರ್ಥ್ಯವನ್ನು ತೋರಿಸಿಕೊಡುತ್ತೇವೆ ಎಂದರು .
ಉಳಿದಂತೆ ಪತ್ರಿಕಾಗೋಷೀಯಲ್ಲಿ ಬಿ.ಎಂ.ಫಾರೂಕ್, ಅಮರನಾಥ ಶೆಟ್ಟಿ, ಉಪಸ್ಥಿತರಿದ್ದರು