ಸಾಂಗ್ಲಿ (ಮೀರಾಜ್),ಏ 20 (Daijiworld News/MSP): ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಾಜ್ ನಲ್ಲಿ ಲಾಕ್ ಡೌನ್ ನಿಂದ ಸಿಕ್ಕಾಕೊಂಡಿರುವ ಕರ್ನಾಟಕ ದಕ್ಷಿಣ ಕನ್ನಡ ಮೂಲದ (ಖಾಸಗಿ ಸಂಸ್ಥೆಯಲ್ಲಿದ್ದ) ಸುಮಾರು 19 ಯುವ ಉದ್ಯೋಗಿಗಳಿಗೆ ಪುನರ್ವಸತಿ ಮಾಡಲಾಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರನ್ನು ಸಂಪರ್ಕಿಸಿದ ಯುವಕರ ಕೋರಿಕೆ ಮೇರೆಗೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಾಜ್ಯ ಅದ್ಯಕ್ಷ ರೋನ್ಸ್ ಬಂಟ್ವಾಳ್ ಇವರನ್ನು ಸಂಪರ್ಕಿಸಿದ ರೈ ಅವರ ಕೋರಿಕೆಯಂತೆ ರೋನ್ಸ್ ಬಂಟ್ವಾಳ್ ತತ್ಕ್ಷಣವೇ ಸಿಕ್ಕಾಕಿಕೊಂಡ ಯುವಕರನ್ನು ಸಂಪರ್ಕಿಸಿ ಪೂರ್ಣ ಮಾಹಿತಿ ಪಡೆದು ಸಾಂಗ್ಲಿಯ ಕೈಗಾರಿಕೋದ್ಯಮಿ, ಬಿಲ್ಲವ ಸಂಘ ಸಾಂಗ್ಲಿ ಇದರ ಉಪಾಧ್ಯಕ್ಷ ಸುಧಾಕರ ಪೂಜಾರಿ (ಹೊಸ್ಮಾರು) ಇವರನ್ನು ಫೋನಾಯಿಸಿ ವಿಷಯ ತಿಳಿಸಿದ್ದರು.
ಕೆಲವೇ ನಿಮಿಷಗಳಲ್ಲಿ ಯುವಕರನ್ನು ಖುದ್ದಾಗಿ ಭೇಟಿಗೈದ ಸುಧಾಕರ್ ಮತ್ತು ರಘುರಾಮ ಪೂಜಾರಿ (ಬಾಳೆಹೊನ್ನೂರು) ಇವರು ಯುವಕರ ವಾಸ್ತವ್ಯ, ಅಲ್ಲಿನ ಪರಿಸ್ಥಿತಿ ತಿಳಿದು ಸಾಂಗ್ಲಿ ಜಿಲ್ಲಾಧಿಕಾರಿ, ಪೋಲಿಸ್ ಆಯುಕ್ತರ ಗಮನಕ್ಕೆ ತಂದಿದ್ದರು. ಅಂತೆಯೇ ಸ್ಥಾನೀಯ ಪ್ರಭಾವಿ ನಾಯಕ, ಯುವೋದ್ಯಮಿ, ಸಮಾಜ ಸೇವಕ ಕನ್ನಡಿಗ ಪ್ರವೀಣ್ ಶೆಟ್ಟಿ ಕೊಡಗು ಇವರ ನೆರವಿನೊಂದಿಗೆ ಪೋಲಿಸ್ ಮುಖ್ಯಸ್ಥರೇ ಆಗಮಿಸಿ ಎಲ್ಲಾ ಯುವಕರ ಮಾಹಿತಿ ಕಲೆಹಾಕಿ ಆರೋಗ್ಯ ತಪಾಸನೆ ನಡೆಸಿ ಶಾಸನ, ಜಿಲ್ಲಾಧಿಕಾರಿ ಸಹಕಾರ ಪಡೆದು ಬಸ್ ಮೂಲಕ ಸಾಂಗ್ಲಿಗೆ ರವಾನಿಸಿ ಅಲ್ಲಿನ ಮುನ್ಸಿಪಾಲಿಟಿ ಕನ್ನಡ ಶಾಲೆಯಲ್ಲಿ ಉಳಕೊಳ್ಳುವ ವ್ಯವಸ್ಥೆ ಮಾಡಿರುವರು. ಕನ್ನಡಿಗ ಮುಖ್ಯ ಶಿಕ್ಷಕ ವಿಠಲ್ ಕೋಲಿ ಯುವಕರನ್ನು ಬರಮಾಡಿ ಕೊಂಡರು.
ಇಲ್ಲಿ ನೆಲೆಯಾಗಿರುವ ಸಂಕಷ್ಟದಲ್ಲಿನ ಕರುನಾಡ ಜನತೆಯ ಆರೈಕೆ ಮಾಡುವುದು ನಮ್ಮ ಜವಾಬ್ದಾರಿ. ಅಂತಯೇ ಇವರೆಲ್ಲರ ಇಡೀ ಆರೋಗ್ಯವನ್ನು ಪರಿಶೀಲಿಸಿ ಸೂಕ್ತ ವ್ಯವಸ್ಥೆ ಮಾಡಿ ಕೊಡಲಾಗುವುದು. ಈ ಬಗ್ಗೆ ಇವರ ಪಾಲಕರು ಚಿಂತನೆ ಮಾಡುವ ಅಗತ್ಯವಿಲ್ಲ ಎಂದು ಪ್ರವೀಣ್ ಶೆಟ್ಟಿ ತಿಳಿಸಿದರು. ಈ ಯುವಕರು ಲಾಕ್ ಡೌನ್ ತನಕ ಆರಾಮವಾಗಿ ಇಲ್ಲಿ ಇರಬಹುದು. ಸದ್ಯ ಉಳಕೊಂಡಿರುವ ನಿವಾಸದ ಬಾಡಿಗೆ, ಇಲ್ಲಿನ ಅವಶ್ಯಕ ಹಣಕಾಸು ಬಗ್ಗೆ ಕೂಡಾ ವ್ಯವಸ್ಥೆ ಮಾಡಲಾಗುವುದು ಎಂದು ಸುಧಾಕರ ಪೂಜಾರಿ ತಿಳಿಸಿದ್ದಾರೆ.
ರಮಾನಾಥ ರೈ ಅವರು ರೋನ್ಸ್ ಬಂಟ್ವಾಳ್ ಮತ್ತು ಸುಧಾಕರ ಪೂಜಾರಿ ಜೊತೆ ಇಂದಿಲ್ಲಿ ಮಾತನಾಡುತ್ತಾ ಶೀಘ್ರಗತಿಯ ಸ್ಪಂದನೆಗೆ ಎಲ್ಲರಿಗೂ ಅಭಿವಂದಿಸಿದ್ದಾರೆ.