ಉಡುಪಿ, ಎ.20 (Daijiworld News/MB) : ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯವೇ ಮುಖ್ಯವಾದುದ್ದು, ಜನಾಭಿಪ್ರಾಯಕ್ಕೆ ಮಾನ್ಯತೆ ನೀಡುವುದು ಸರ್ಕಾರದ ಜವಾಬ್ದಾರಿ, ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಲಾಕ್ಡೌನ್ನ್ನು ಮುಂದುವರಿಸುವಂತೆ ಜನರು ಹೇಳಿದ ಕಾರಣಕ್ಕಾಗಿ ಪುನಃ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು ಲಾಕ್ಡೌನ್ನ್ನು ಮುಂದುವರೆಸಿದ್ದಾರೆ ಎಂದು ಮೀನುಗಾರಿಕಾ ಮತ್ತು ಧಾರ್ಮಿಕ ದತ್ತಿ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮೊದಲು ಲಾಕ್ಡೌನ್ ಸಡಿಲಿಕೆ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಜನರು ಕೊರೊನಾ ನಿಯಂತ್ರಣಕ್ಕಾಗಿ ಕಷ್ಟವಾದರೂ ಕಠಿಣ ಜೀವನ ನಡೆಸಲು ಸಿದ್ಧ ಎಂದು ತಿಳಿಸಿದ್ದಾರೆ. ಆ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ತೀರ್ಮಾನವನ್ನು ಪರಿಶೀಲನೆ ನಡೆಸಿ ಲಾಕ್ಡೌನ್ ಸಡಿಲಿಕೆ ಮಾಡಿಲ್ಲ. ಈ ಸಂದರ್ಭದಲ್ಲಿ ಜನರು ಸರ್ಕಾರದ ಮೇಲೆ ಆರ್ಥಿವಾಗಿ ತೊಂದರೆ ಉಂಟಾಗುತ್ತದೆ. ಆದರೆ ಕೊರೊನಾ ನಿಯಂತ್ರಣಕ್ಕಾಗಿ ಈ ಕ್ರಮ ಅಗತ್ಯ. ಎಲ್ಲರೂ ಸರಳವಾಗಿ ಜೀವನ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆ ನಡೆಸಲು ತೊಂದರೆಯಿಲ್ಲ. ಆದರೆ ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿದೆ ಎಂದರು.
ಯಾಂತ್ರಿಕ ಮೀನುಗಾರಿಕೆ ಆರಂಭ ಮಾಡಿದರೆ ಸಾವಿರಾರು ಜನರು ಸೇರುತ್ತಾರೆ. ಅದಕ್ಕಾಗಿ ಮೀನುಗಾರಿಕೆಗೆ ಅವಕಾಶ ಹೆಚ್ಚು ಮಾಡಲು ಹಂತ ಹಂತವಾಗಿ ತೀರ್ಮಾನ ಮಾಡುತ್ತೇವೆ. ಈ ಕುರಿತಾಗಿ ಮುಂದಿನ ಎರಡು ದಿನದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಮೀನುಗಾರರು ಅತಿಕ್ರಮ ಮೀನುಗಾರಿಕೆಗೆ ಸಂಬಂಧಿಸಿ ದೂರು ನೀಡಿದ್ದಾರೆ. ಈ ಕುರಿತಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಕಾನೂನು ಬಾಹಿರವಾಗಿ ಮೀನುಗಾರಿಕೆ ಮಾಡುವುದನ್ನು ತಡೆಯಬೇಕು ಎಂದು ತಿಳಿಸಿದ್ದೇನೆ. ಅವರು ಈ ಬಗ್ಗೆ ಕರಾವಳಿ ಕಾವಲು ಪಡೆಗೆ ಆದೇಶ ನೀಡುತ್ತಾರೆ. ಅನ್ಯ ರಾಜ್ಯದವರು ಲೈಟ್ ಫಿಶಿಂಗ್ ಮಾಡದಂತೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
ಕರಾವಳಿ ಮೂಲದ ಬೆಂಗಳೂರು, ಮುಂಬೈನಲ್ಲಿರುವ ಸಾವಿರಾರು ಜನರು ಊರಿಗೆ ಬರುತ್ತೇವೆ ಎಂದು ಕರೆ ಮಾಡಿ ತಿಳಿಸುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದೆ. ಸರ್ಕಾರ ಈ ಸಂದರ್ಭದಲ್ಲಿ ಕನ್ನಡಿಗರ ಹಿತ ಕಾಯಲು ಬದ್ಧವಾಗಿದೆ. ಈ ಕುರಿತಾಗಿ ಮುಖ್ಯಮಂತ್ರಿ ಹಾಗೂ ಕಾರ್ಯದರ್ಶಿ ಜೊತೆಗೆ ಮಾತಾನಾಡಿದ್ದೇನೆ. ಕನ್ನಡಿಗರು ಇರುವಲ್ಲೇ ಆಹಾರ ಮತ್ತು ಔಷಧ ದೊರೆಯುವಂತೆ ನೋಡಿಕೊಳ್ಳುತ್ತೇವೆ. ಕೇರಳದಲ್ಲಿರುವ ನಮ್ಮ ಮೀನುಗಾರರ ಹಿತವನ್ನೂ ಕಾಪಾಡುತ್ತೇವೆ ಎಂದು ಹೇಳಿದರು.
ಕೊರೊನಾದಿಂದಾಗಿ ಸಂಕಷ್ಟದಲ್ಲಿರುವವರಿಗೆ ದೇವಸ್ಥಾನಗಳ ಮುಖಾಂತರ ನೆರವು ನೀಡಲಾಗುತ್ತದೆ. ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಿಂದ 2,500 ಕಿಟ್, ಮಂದಾರ್ತಿ ದೇವಾಲಯದಿಂದ 2,500 ಕಿಟ್, ಅನಂತೇಶ್ವರ ದೇವಸ್ಥಾನದಿಂದ 1,000 ಆಹಾರ ಕಿಟ್ ವಿತರಣೆ ಮಾಡಲಾಗುವುದು. ಶೀಘ್ರವಾಗಿ ಅರ್ಚಕರಿಗೆ ಆಹಾರ ಸಾಮಾಗ್ರಿ ನೀಡುವ ಕುರಿತಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಹಾಗೆಯೇ ಅರ್ಚಕರ ತಸ್ತೀಕು ಮುಂಗಡವಾಗಿ ನೀಡುವ ಚಿಂತನೆ ನಡೆದಿದೆ. ಕಲಾವಿದರು ಹಾಗೂ ಅರ್ಚಕರಿಗೆ ಆಹಾರ ಸಾಮಾಗ್ರಿ ನಿಡಲಾಗುತ್ತದೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದರು.