ಪುತ್ತೂರು, ಎ.20 (Daijiworld News/MB) : ಲಾಕ್ಡೌನ್ ಆದ ಕಾರಣದಿಂದಾಗಿ ಗುಜರಾತ್- ಮಹಾರಾಷ್ಟ್ರ ಗಡಿಯಲ್ಲಿ ಸಿಲುಕಿ ಕಾರಿನಲ್ಲೇ 21 ದಿನಗಳ ಕಾಲವಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಆಶಿಕ್ ಹುಸೇನ್ ಮತ್ತು ಮೊಹಮ್ಮದ್ ಟಕೀನ್ ಮರ್ಲಿ ಅವರಿಗೆ ಕೊನೆಗೂ ಉದ್ಯಮಿಯೊಬ್ಬರ ಫ್ಲ್ಯಾಟ್ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯಾಗಿದೆ.
ಲಾಕ್ಡೌನ್ ಆದ ಕಾರಣದಿಂದಾಗಿ ಈ ಕಡೆ ಬರಲಾಗದೆ ವಸತಿ, ಆಹಾರದ ವ್ಯವಸ್ಥೆಯೂ ಇಲ್ಲದೇ ಈ ಇಬ್ಬರು ಯುವಕರು ಕಾರಿನಲ್ಲೇ ಉಳಿದುಕೊಂಡಿದ್ದಾರೆ ಎಂಬ ವಿಷಯ ಗಮನಕ್ಕೆ ಬಂದ ಬಳಿಕ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಗುಜರಾತ್ನ ವಲ್ಸಾದ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು.
ಮಾರ್ಚ್ ಎಪ್ರಿಲ್ 16 ರಂದು ಈ ಯುವಕರನ್ನು ಫ್ಲ್ಯಾಟ್ಗೆ ಕರೆದೊಯ್ಯಲಾಗಿದ್ದು ಆರೋಗ್ಯ ತಪಾಸಣೆ ನಡೆಸಲಾಗಿದೆ. ಗಂಟಲ ದ್ರವದ ಮಾದರಿಯ ಪರೀಕ್ಷೆಯ ವರದಿಯು ನೆಗೆಟಿವ್ ಬಂದಿದೆ.
ತಮಗೆ ಆಹಾರ ವಸತಿ ವ್ಯವಸ್ಥೆಗೆ ಸಹಾಯ ಮಾಡಿದ ದ.ಕ. ಜಿಲ್ಲಾಡಳಿತಕ್ಕೆ ಹಾಗೂ ಪತ್ರಿಕಾ ಮಿತ್ರರಿಗೆ ಈ ಯುವಕರು ಧನ್ಯವಾದ ಸಲ್ಲಿಸಿದ್ದಾರೆ.