ಬೆಳ್ತಂಗಡಿ, ಏ 20 (Daijiworld News/MSP): ಕೊರೊನಾ ಸೋಂಕಿನ ಭಯದ ನಡುವೆಯೂ ಸರಕಾರವೇನೋ ಒಂದಷ್ಟು ಇಲಾಖಾ ಸಿಬ್ಬಂದಿಗಳಿಗೆ ಎ.20ರಿಂದ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ. ಆದರೆ ಬಹುತೇಕ ಗ್ರಾಮೀಣ ಪ್ರದೇಶದಿಂದ ತಾಲೂಕು ಕೇಂದ್ರದಲ್ಲಿರುವ ಇಲಾಖಾ ಕಚೇರಿಗೆ ಬರಲು ವಿವಿಧ ಇಲಾಖಾ ಸಿಬ್ಬಂದಿಗಳಿಗೆ ವಾಹನದ ವ್ಯವಸ್ಥೆ ಇಲ್ಲದೇ ಸರಕಾರಿ ನೌಕರರು ಪರದಾಡುವಂತಾಗಿದೆ. ಅದರಲ್ಲೂ ಮಹಿಳಾ ಸಿಬ್ಬಂದಿಗಳ ಪಾಡಂತೂ ಇನ್ನೂ ಕಷ್ಟಕರ.
ಈ ಸರಕಾರಿ ಸಿಬ್ಬಂದಿಗಳು ತಮ್ಮ ಮನೆಯಿಂದ ತಾಲೂಕು ಕೇಂದ್ರದಲ್ಲಿರುವ ಕಚೇರಿಗೆ ಬರೋದು ಹೇಗೆ, ಸಂಜೆ ಮನೆಗೆ ಹಿಂತಿರುಗುವುದು ಹೇಗೆ ಎಂಬ ಪ್ರಶ್ನೆಗೆ ತಾಲೂಕು ಆಡಳಿತ ಉತ್ತರ ಕಂಡುಕೊಳ್ಳಬೇಕಾಗಿದೆ. ಬಹುತೇಕ ಇಲಾಖೆಗಳಿಗೆ ಸರಕಾರ ವಾಹನ ಒದಗಿಸಿದರೂ, ಇಂತಹ ಸಂಕಷ್ಟದ ಸಂದರ್ಭದಲ್ಲಿ ಈ ವಾಹನವನ್ನು ತಮ್ಮದೇ ಇಲಾಖೆಯ ಸಿಬ್ಬಂದಿಗಳ ಸಮಸ್ಯೆ ಪರಿಹಾರಕ್ಕೆ ಬಳಸಲು ಇಲಾಖಾಧಿಕಾರಿಗಳು ಸಮ್ಮತಿಸದಿರುವುದು ಸಮಸ್ಯೆ ಪರಿಹಾರಕ್ಕೆ ಇದ್ದ ಒಂದು ಮಾರ್ಗವನ್ನೂ ಬಂದ್ ಮಾಡಿದಂತಾಗಿದೆ. ಸರಕಾರ ಇಲಾಖೆಗೆ ವಾಹನ ಒದಗಿಸಿದ್ದು ಇಲಾಖೆಯ ಕೆಲಸಗಳ ಬಳಕೆಗೆ. ಲಾಕ್ ಡೌನ್ ನಂತಹ ಸಂಕಷ್ಟದ ಸಂದರ್ಭದಲ್ಲಿ ಇಲಾಖಾ ಸಿಬ್ಬಂದಿಗಳನ್ನು ಕಛೇರಿಗೆ ಕರೆತಂದು ಸಂಜೆ ವಾಪಾಸ್ ಮನೆಗೆ ಬಿಡುವುದೂ ಸರಕಾರಿ ಕೆಲಸವೇ. ಈ ಅನಿವಾರ್ಯತೆ ಬೆಳ್ತಂಗಡಿ ತಾಲೂಕಿನ ಬಹುತೇಕ ಇಲಾಧಿಕಾರಿಗಳಿಗೆ ಅರ್ಥವಾಗದಿರುವುದು ಸಮಸ್ಯೆ ಪರಿಹಾರಕ್ಕೆ ತೊಡಕಾಗಿದೆ. ಪರಿಣಾಮ ಇಲಾಖೆಯ ಸಿಬ್ಬಂದಿಗಳು ಅದರಲ್ಲೂ ಮುಖ್ಯವಾಗಿ ವಿವಿಧ ಇಲಾಖೆಯ ಮಹಿಳಾ ಸಿಬ್ಬಂದಿಗಳು ಸಮಸ್ಯೆಗೆ ಪರಿಹಾರ ಕಾಣದೇ ಪರಿತಪಿಸುವಂತಾಗಿದೆ.
ತಾಲೂಕಿನಲ್ಲಿ ಮೆಸ್ಕಾಂ ಇಲಾಖೆಯವರು ಮಾತ್ರ ತನ್ನ ಸಿಬ್ಬಂದಿಗಳನ್ನು ಅವರ ಮನೆಗಳಿಂದ ಕಛೇರಿಗೆ ಕರೆತಂದು ಸಂಜೆ ಮನೆಗೆ ಮತ್ತೆ ಬಿಟ್ಟು ಬರಲು ಇಲಾಖಾ ವಾಹನ ಬಳಸುತ್ತಿದ್ದು, ಇದು ಇತರ ಇಲಾಖಾಧಿಕಾರಿಗಳ ಮಾನವೀಯ ಕಣ್ಣು ತೆರೆಸಲು ವೇದಿಕೆಯಾಗಬೇಕಾಗಿದೆ.
ಇದರೊಂದಿಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕ್ವಾರೆಂಟೈನಿಗೆ ಒಳಗಾದವರ ಪರೀಕ್ಷೆ ನಡೆಸಲು ಮನೆಮನೆಗೆ ಭೇಟಿ ನೀಡುತ್ತಿರುವ ಆಶಾ ಕಾರ್ಯಕರ್ತೆಯರ ಗೋಳು ಕೇಳುವವರೇ ಇಲ್ಲವಾಗಿದೆ. ಪಾಪ, ದಿನಬೆಳಗಾದರೆ ಬ್ಯಾಗ್ ಹೆಗಲೇರಿಸಿಕೊಂಡು ಹಳ್ಳಿಯತ್ತ ಹೆಜ್ಜೆ ಹಾಕುವ ಆಶಾ ಕಾರ್ಯಕರ್ತೆಯರು ಮಧ್ಯಾಹ್ನದ ಉರಿ ಬಿಸಿಲಿನಲ್ಲೂ ಮನೆಮನೆಗೆ ತೆರಳಿ ಎಲ್ಲರ ಆರೋಗ್ಯ ವಿಚಾರಿಸುತ್ತಿದ್ದಾರೆ. ಇವರಿಗೂ ಸ್ಥಳೀಯವಾಗಿ ಆಯಾ ಗ್ರಾಮ ಪಂಚಾಯತಿನಿಂದ ವಾಹನದ ವ್ಯವಸ್ಥೆಯಾದರೆ, ಇವರಿಂದ ಇನ್ನೂ ಉತ್ತಮ ಸೇವೆ ನಿರೀಕ್ಷಿಸಲು ಸಾಧ್ಯ. ಕೊರೊನಾ ಸೋಂಕಿನ ವಿರುದ್ಧದ ಹೋರಾಟ ಕೆಲದಿನಗಳದ್ದಲ್ಲ. ಸುಧೀರ್ಘವಾಗಿ ನಡೆಯಬಹುದಾದ ಈ ಹೋರಾಟದಲ್ಲಿ ಅಂತಿಮವಾಗಿ ಮಾನವ ಜಯ ಸಾಧಿಸಬೇಕಾದರೆ ಕೆಳಸ್ತರದಲ್ಲಿ (ರೂಟ್ ಲವೆಲ್) ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಸರಕಾರ ಕನಿಷ್ಟ ಮೂಲಭೂತ ಸೌಕರ್ಯವನ್ನಾದರೂ ಒದಗಿಸಬೇಕು. ಬೆಳ್ತಂಗಡಿ ತಾಲೂಕಿನಲ್ಲಿಕೊರೋನಾ ಸೋಂಕಿನ ವಿರುದ್ಧದ ಹೋರಾಟದ ಸಾರಥ್ಯ ವಹಿಸಿರುವ ಶಾಸಕ ಹರೀಶ್ ಪೂಂಜಾ ಇತ್ತ ಗಮನಹರಿಸುವಂತಾದರೆ ಮಾತ್ರ ನಮ್ಮೂರಲ್ಲಿ ಈ ಸಮಸ್ಯೆ ಪರಿಹಾರ ಕಾಣಲು ಸಾಧ್ಯ. ಆ ಮೂಲಕ ಕೊರೋನಾ ಸೋಂಕಿನ ವಿರುದ್ಧದ ಹೋರಾಟ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ.