ಬೆಂಗಳೂರು, ಮಾ 06 : ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾದ ಭಿನ್ನಮತದ ಪರಿಣಾಮ ತಾನೇ ಕಟ್ಟಿದ್ದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೆ ನಟ ಉಪೇಂದ್ರ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ರುಪ್ಪೀಸ್ ರೆಸಾರ್ಟ್ನಲ್ಲಿ ತನ್ನ ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಾವೆಲ್ಲರೂ ಸೇರಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದು ಇನ್ನು ಮುಂದೆ ನನಗೂ ಹಾಗೂ ಕೆಪಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಘೋಷಣೆ ಮಾಡಿದ್ದಾರೆ.
ಪ್ರಜಾಕೀಯದ ಸಿದ್ಧಾಂತ ಇಟ್ಟುಕೊಂಡೇ ಹೊಸ ಪಕ್ಷ ಕಟ್ಟುತ್ತೇವೆ. ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತೇವೆ. ಕೆಪಿಜೆಪಿಗೆ ರಾಜಕೀಯ ಬೇಕಾಗಿತ್ತು. ನಮಗೆ ಬೇಕಾಗಿರುವುದು ಪ್ರಜಾಕೀಯ . ಇದನ್ನೇ ಒಪ್ಪಿ ಅದರಲ್ಲೇ ಹೋರಾಡಲು ಬಂದವರು ನಾವು. ಹೀಗಾಗಿ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಮರಳುವುದಿಲ್ಲ ಎಂದರು.
ಕೆಪಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಗೌಡ ಹಾಗೂ ಉಪೇಂದ್ರ ನಡುವೆ ಸೀಟು ಹಂಚಿಕೆ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಮಹೇಶ್ ಗೌಡ ಹಾಗೂ ಉಪೇಂದ್ರ ಪತ್ರಿಕಾಗೋಷ್ಠಿ ನಡೆಸಿದ್ದರು.