ಮಂಗಳೂರು, ಎ.21 (Daijiworld News/MB) : ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದನ್ನು ಉತ್ತೇಜಿಸಲೆಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸುಮಾರು 300 ಕ್ಕೂ ಅಧಿಕ ಪೆಟ್ರೋಲ್ ಬಂಕ್ಗಳು "ನೋ ಮಾಸ್ಕ್ ನೋ ಫ್ಯುಯೆಲ್" ಅಭಿಯಾನ ಆರಂಭ ಮಾಡಿದ್ದು ಮಾಸ್ಕ್ ಧರಿಸಿದರಷ್ಟೇ ಪೆಟ್ರೋಲ್ ಡಿಸೇಲ್ ಲಭಿಸಲಿದೆ.
ಈ ನೋ ಮಾಸ್ಕ್ ನೋ ಫ್ಯುಯೆಲ್ ಅಭಿಯಾನವನ್ನು ಅಖಿಲ ಭಾರತ ಪೆಟ್ರೋಲ್ ವರ್ತಕರ ಸಂಘ, ಕರ್ನಾಟಕ ಪೆಟ್ರೋಲ್ ವರ್ತಕರ ಸಂಘ ಮತ್ತು ಜಂಟಿಯಾಗಿ ಆಯೋಜನೆ ಮಾಡಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸುಮಾರು 3,500 ಕ್ಕೂ ಅಧಿಕ ಸಿಬಂದಿಗಳು ಪೆಟ್ರೋಲ್ ಬಂಕ್ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕೊರೊನಾ ಸೋಂಕಿನಿಂದ ಸುರಕ್ಷಿತವಾಗಿರಲು ಅಗತ್ಯವಾದ ಮಾಸ್ಕ್ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ ಬೇರೆ ಬೇರೆ ಕಡೆಗಳಿಂದ ಬರುವ ಗ್ರಾಹಕರು ಮಾಸ್ಕ್ ಧರಿಸದೆಯೇ ಬರುವುದರಿಂದ ಸಿಬ್ಬಂದಿಗಳು ಆತಂಕದ ವಾತಾವರಣದಲ್ಲಿ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಮಾಸ್ಕ್ ಹಾಕುವುದರ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಆರಂಭ ಮಾಡಲಾಗಿದ್ದು ಪೆಟ್ರೋಲ್ ಬಂಕ್ಗೆ ಬರುವ ಗ್ರಾಹಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರವೇ ಪೆಟ್ರೋಲ್, ಡಿಸೇಲ್ ಒದಗಿಸಲಾಗುತ್ತದೆ.
ಈ ಕುರಿತಾಗಿ ಮಾಹಿತಿ ನೀಡಿರುವ ದ.ಕ. ಹಾಗೂ ಉಡುಪಿ ಜಿಲ್ಲಾ ಪೆಟ್ರೋಲಿಯಂ ವರ್ತಕರ ಸಂಘದ ಅಧ್ಯಕ್ಷರು ಪಿ. ವಾಮನ ಪೈ ಅವರು, ನೋ ಮಾಸ್ಕ್ ನೋ ಫ್ಯುಯೆಲ್ ಅಭಿಯಾನವನ್ನು ಮಾಸ್ಕ್ ಧರಿಸುವ ಅಗತ್ಯದ ಅರಿವು ಮೂಡಿಸಲು ಹಾಗೂ ಪ್ರೇರೆಪಿಸಲೆಂದು ಪ್ರಾರಂಭ ಮಾಡಿದ್ದೇವೆ. ನಮಗೆ ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಆರೋಗ್ಯವು ಅತೀ ಮುಖ್ಯ. ಇನ್ನು ಮಾಸ್ಕ್ ಧರಿಸಿದ ಗ್ರಾಹಕರಿಗೆ ಮಾತ್ರ ಪೆಟ್ರೋಲ್, ಇಲ್ಲದಿದ್ದಲ್ಲಿ ಹಿಂದಕ್ಕೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.