ಬಂಟ್ವಾಳ, ಏ 21 (Daijiworld News/MSP): ಕೊರೊನಾ ಮಹಾಮಾರಿ ದ.ಕ ಜಿಲ್ಲೆಯಲ್ಲಿ ಸದ್ಧಿಲ್ಲದೆ ತನ್ನ ಕಬಂಧ ಬಾಹು ಚಾಚುತ್ತಿದೆಯಾ ಎಂಬ ಸಂಶಯ ಕಾಡತೊಡಗಿದೆ. ಬಂಟ್ವಾಳದ ತಾಲೂಕಿನ ಕಸ್ಬಾ ಗ್ರಾಮದ ನಿವಾಸಿಯಾಗಿರುವ 67ವರ್ಷದ ಮಹಿಳೆಯಲ್ಲಿ ಮಂಗಳವಾರ ಸೋಂಕು ದೃಢಪಟ್ಟಿದೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಏ.18 ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು ಇವರ ಗಂಟಲಿನ ದ್ರವ ಪರೀಕ್ಷೆಯಲ್ಲಿ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಇವರು ಏ.19 ಕೊರೊನಾ ಸೋಂಕಿನಿಂದ ಮೃತಪಟ್ಟ (ಬಂಟ್ವಾಳದ ಕಸ್ಬಾ ರೋಗಿ-360 )ಮಹಿಳೆಯ ನೆರೆಮನೆಯವರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿದೆ. ಈ ಪೈಕಿ 3 ಸಕ್ರಿಯ ಪ್ರಕರಣಗಳಾಗಿದೆ.