ಕಡಬ, ಮಾ 06 : ಕಾಡಾನೆಯ ದಾಳಿಗೆ ಓರ್ವ ಕಾರ್ಮಿಕ ಬಲಿಯಾಗಿ , ಇನ್ನೋರ್ವ ಗಾಯಗೊಂಡ ಹೃದಯ ವಿದ್ರಾವಕ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದ ಆನೆಕಲ್ಲು ಮಂಗಳವಾರ ತಡರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ರೈಲ್ವೇ ಕಾರ್ಮಿಕ ಮಧುರೈ ನಿವಾಸಿ ರಂಜಿತ್ (52) ಎಂದು ಗುರುತಿಸಿಲಾಗಿದೆ.
ಕೊಂಬಾರು ಗ್ರಾಮದ ಆನೇಕಲ್ ರೈಲ್ವೆ ಸೇತುವೆಯ ಬಳಿ ಸೇತುವೆ ದುರಸ್ಥಿ ಕಾರ್ಯಕ್ಕೆ ಬಂದಿದ್ದ ಕಾರ್ಮಿಕರು ರೈಲ್ವೆ ಹಳಿ ಬಳಿ ಟೆಂಟ್ ಹಾಕಿದ್ದರು. ಮಂಗಳವಾರ ರಾತ್ರಿ , ತೀವ್ರ ಸೆಖೆಯಿದ್ದ ಕಾರಣ ಮೂವರು ಕಾರ್ಮಿಕರು ಶೆಡ್ ನಿಂದ ಹೊರಬಂದು ಮಲಗಿದ್ದರು. ತಡರಾತ್ರಿ ಕಾಡಾನೆ ಬಂದು ದಾಳಿ ಮಾಡಿ ತಿವಿದು ಓರ್ವನನ್ನು ಕೊಂದು ಹಾಕಿದ್ದು, ಮತ್ತೋರ್ವ ಕಾರ್ಮಿಕ ಲಕ್ಷ್ಮಣ ಎಂಬವರನ್ನು ಗಾಯಗೊಳಿಸಿದೆ.ಜೊತೆಯಲ್ಲೇ ಮಲಗಿದ್ದ ಷಣ್ಮುಗಂ ಎಂಬಾತ ಓಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹ ಸಾಗಿಸುವ ವ್ಯವಸ್ಥೆ ಮಾಡಲಾಗಿದೆ. ಗಾಯಾಳು ಲಕ್ಷ್ಮಣ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಈ ಭಾಗದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆ ಭಾಗದ ಜನರು ದೂರಿಕೊಂಡಿದ್ದರು.