ಮಂಗಳೂರು, ಏ 21 (Daijiworld News/MSP): ಪಾದರಾಯನಪುರಕ್ಕೆ ಘಟನೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್ ರನ್ನ ಗೂಂಡಾ ಕಾಯ್ದೆಯಡಿ ಬಂಧಿಸಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ನಳಿನ್, " ಜಮೀರ್ ಅವರು ಅಧಿಕಾರಿಗಳನ್ನ ಬೆದರಿಸಿ ನನ್ನ ಅನುಮತಿ ಪಡೆದು ಬನ್ನಿ ಎಂದು ಹೇಳಲು ಭಾರತ ಸರ್ವಾಧಿಕಾರಿ ರಾಷ್ಟ್ರವಲ್ಲ. ಪಾದಾರಯಪುರದ ಘಟನೆ ನಡೆದಾಗ ಓರ್ವ ಜವಬ್ದಾರಿಯುತ ಸರ್ಕಾರದ ಪ್ರತಿನಿಧಿಯಾಗಿ ಶಾಸಕ ಜಮೀರ್ ಅವರು ತೆಗೆದುಕೊಂಡ ನಿರ್ಧಾರ ಮತ್ತು ವರ್ತನೆ ಕಾನೂನು ಬಾಹಿರ. ಗೂಂಡಾಗಿರಿಗೆ ಶಾಸಕ ಬೆಂಗಾವಲಾಗಿ ನಿಂತಿರೋದು ನಿಜಕ್ಕೂ ನಾಚಿಕೆಗೇಡು. ಹೀಗಾಗಿ ಜಮೀರ್ ಅಹ್ಮದ್ ಮೇಲೆ ಕೇಸು ದಾಖಲಿಸಿ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ನಾನು ರಾಜ್ಯದ ಮುಖ್ಯಮಂತ್ರಿಗಳ ವಿನಂತಿಸುತ್ತೇನೆ" ಎಂದು ಹೇಳಿದ್ದಾರೆ.
ಶಾಸಕ ಜಮೀರ್ ಅವರ ಈ ರೀತಿಯ ವರ್ತನೆ ಇದೇ ಮೊದಲ ಬಾರಿ ಅಲ್ಲ, ಹತ್ತಾರು ಬಾರಿ ದೇಶದ್ರೋಹ, ಕಾನೂನು ಬಾಹಿರ ಕೃತ್ಯವೆಸಗಿದ್ದಾರೆ. ಅವರು ಈ ರೀತಿಯಾಗಿ ವರ್ತಿಸಿ ಕಾಂಗ್ರೆಸ್ ಪಕ್ಷಕ್ಕೂ ಅವಮಾನ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಕೂಡ ಅವರನ್ನ ತಮ್ಮ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಜಮೀರ್ ಅಹ್ಮದ್ ಮೇಲೆ ಕೇಸು ದಾಖಲಿಸಿ ಗೂಂಡಾ ಕಾಯ್ದೆಯಡಿ ಬಂಧಿಸಿ ತಕ್ಷಣ ಜೈಲಿಗೆ ಹಾಕುವ ಕೆಲಸ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಪಾದರಾಯಣಪುರ ಪ್ರಕರಣದ ನಂತರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರೋದು ಸ್ವಾಗತಾರ್ಹ ಎಂದ ಅವರು ಮುಖ್ಯಮಂತ್ರಿ ಮತ್ತು ಸರ್ಕಾರವನ್ನ ಅಭಿನಂದಿಸಿದ್ದು, ಘಟನೆಯ ಬಳಿಕ ಸರ್ಕಾರಕ್ಕೆ ಬೆಂಬಲ ನೀಡಿದ ಕಾಂಗ್ರೆಸ್ ಮತ್ತು ಡಿಕೆಶಿಯವರ ನಡೆಗೂ ನಳಿನ್ ಅಭಿನಂದನೆ ಸಲ್ಲಿಸಿದ್ದಾರೆ.