ಮಂಗಳೂರು, ಎ.21 (Daijiworld News/MB) : ಯಾವುದೇ ಕಾರಣಕ್ಕೂ ಹುಳುವಿರುವ ಕಳಪೆ ಗುಣಮಟ್ಟದ ಅಕ್ಕಿ ಜನರಿಗೆ ವಿತರಣೆ ಮಾಡಬಾರದು ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.
ಜನರಿಂದ ಮಾಹಿತಿ ಬಂದ ಮೇರೆಗೆ ನಗರದ ಶಕ್ತಿನಗರದಲ್ಲಿರುವ ಕೆ.ಎಸ್.ಎಫ್.ಸಿ. ಗೋದಾಮಿಗೆ ಭೇಟಿ ನೀಡಿದ ಅವರು ಅಲ್ಲಿ ದಾಸ್ತಾನಿರುವ ಸುಮಾರು 130 ಕ್ವಿಂಟಾಲ್ ತೀರಾ ಕಳಪೆ ಮಟ್ಟದ ಹುಳು ಇರುವ ಅಕ್ಕಿಯನ್ನು ಪರೀಕ್ಷಿಸಿದರು.
ಆ ಕೂಡಲೇ ಆಹಾರ ಇಲಾಖೆಯ ಉಪ ನಿರ್ದೇಶಕ ಶ್ರೀ.ಮಂಜುನಾಥ್ರವರಿಗೆ ಕರೆ ಮಾಡಿದ ಅವರು ಈ ಹುಳವಿರುವ ಅಕ್ಕಿಯನ್ನು ಯಾವ ಕಾರಣಕ್ಕೂ ಜನರಿಗೆ ವಿತರಣೆ ಮಾಡಕೂಡದು. ಈ ಕೂಡಲೇ ಗೋದಾಮಿನಿಂದ ಅದನ್ನು ವರ್ಗಾಹಿಸಬೇಕು. ಇಲ್ಲದಿದ್ದರೆ ಅದು ಅಲ್ಲಿರುವ ಉತ್ತಮ ಗುಣಮಟ್ಟದ ಅಕ್ಕಿಗೆ ಆ ಹುಳಗಳು ಪಸರಿಸುವ ಸಾಧ್ಯತೆ ಇದೆ ಎಂದು ಸಲಹೆ ನೀಡಿದರು.
ಇದಕ್ಕೆ ಸ್ಪಂದಿಸಿದ ಉಪ ನಿರ್ದೇಶಕರು ಕೂಡಲೇ ಹುಳವಿರುವ ಅಕ್ಕಿಯನ್ನು ಬೇರೆಡೆಗೆ ವರ್ಗಾಹಿಸುತ್ತೇನೆ ಎಂದು ತಿಳಿಸಿದರು.