ಮಂಗಳೂರು, ಏ 21(DaijiworldNews/SM): ಕೊರೊನಾ ನಿಯಂತ್ರಣಕ್ಕೆ ಹಗಲು ರಾತ್ರಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನು ಗೌರವದಿಂದ ಕಾಣಬೇಕಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿಕೊಂಡಿದ್ದಾರೆ.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯಲ್ಲಿರುವ 40 ಆಶಾ ಕಾರ್ಯಕರ್ತರನ್ನು ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಶಾಸಕ ವೇದವ್ಯಾಸ್ ಕಾಮತ್ ಅವರು ಗೌರವ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಶಾಸಕರು, ಕೋವಿಡ್ 19 ವೈರಸ್ ವಿರುದ್ಧ ಇಡೀ ದೇಶ ಒಂದಾಗಿ ನಿಂತಿದೆ. ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳು, ಪೋಲಿಸರು ಹಾಗೂ ವಿವಿಧ ಇಲಾಖೆಗಳು ದಿನ ರಾತ್ರಿ ಎನ್ನದೆ ನಮಗಾಗಿ ಶ್ರಮಿಸುತ್ತಿದ್ದಾರೆ. ಹಾಗೆಯೇ ಆಶಾ ಕಾರ್ಯಕರ್ತೆಯರೂ ಕೂಡ ಮನೆ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸುವುದು, ಜಾಗೃತಿ ಮೂಡಿಸುವ ಕಾರ್ಯಗಳನ್ನು ಉತ್ತಮವಾಗಿ ನಿಭಾಯಿಸುತಿದ್ದಾರೆ. ಹಾಗಾಗಿ ಅವರ ಸೇವಾ ಕಾರ್ಯಗಳಿಗೆ ಅವರನ್ನು ಗೌರವಿಸಲಾಯಿತು ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಕೊರೆನೋ ವಿರುದ್ಧ ಹೋರಾಡುವ ಎಲ್ಲರನ್ನೂ ಗೌರವಿಸಬೇಕಿದೆ. ಇಂದಿನ ಸ್ಥಿತಿಗತಿಗಳನ್ನು ಅವಲೋಕಿಸಿದರೆ ಆಶಾ ಕಾರ್ಯಕರ್ತರ ಕುರಿತು ತಾತ್ಸಾರದ ಮನೋಭಾವ ಕೆಲವರಲ್ಲಿದೆ. ಆದರೆ ಅವರು ನಮಗಾಗಿ ದಿನವಿಡೀ ಸುಡು ಬಿಸಿಲನ್ನೂ ಲೆಕ್ಕಿಸದೆ ಮನೆ ಮನೆಗೂ ತೆರಳಿ ಪರಿಸ್ಥಿತಿಯ ಮಾಹಿತಿ ಸಂಗ್ರಹಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಾಹಿತಿ ಸಂಗ್ರಹಕ್ಕಾಗಿ ನಮ್ಮ ಮನೆಯ ಬಳಿ ಬಂದರೆ ಅವರನ್ನು ಗೌರವದಿಂದ ಕಾಣಬೇಕು, ನಾವೆಲ್ಲರೂ ಅವರ ಸೇವೆಗೆ ಗೌರವ ಸಲ್ಲಿಸಬೇಕೆಂದು ಶಾಸಕರು ತಿಳಿಸಿದ್ದಾರೆ.
ಸುಮಾರು 40 ಆಶಾ ಕಾರ್ಯಕರ್ತರಿಗೆ ಗೌರವ ಧನ, ಹಾಗೂ ಆಹಾರ ಸಾಮಾಗ್ರಿಗಳ ಕಿಟ್, ತಲಾ 10 ರಂತೆ ಮಾಸ್ಕ್ ಹಾಗೂ ತಲೆಗೆ ಧರಿಸುವ ಮಾಸ್ಕ್ ಗಳನ್ನು ನೀಡಿ ಶಾಲು ಹೊದೆಸಿ ಗೌರವಿಸಲಾಯಿತು.