ಕಾಸರಗೋಡು, ಏ 21(DaijiworldNews/SM): 36 ದಿನಗಳ ಹಿಂದೆ ದುಬೈಯಿಂದ ಬಂದಿದ್ದ ಕಾಸರಗೋಡು ನಿವಾಸಿಗೆ ಇದೀಗ ಕೊರೊನಾ ಪಾಸಿಟಿವ್ ಪತ್ತೆಯಾಗುವ ಮೂಲಕ ಜಿಲ್ಲೆಯ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಹಾಗೂ ಆರೋಗ್ಯ ಇಲಾಖೆಯನ್ನು ಚಿಂತಿಸುವಂತೆ ಮಾಡಿದೆ.
ಮಾರ್ಚ್ 16ರಂದು ದುಬೈಯಿಂದ ಬಂದಿದ್ದ ವ್ಯಕ್ತಿಯಲ್ಲಿ ಯಾವುದೇ ಕೊರೊನಾ ಸೋಂಕು ಲಕ್ಷಣಗಳಿರಲಿಲ್ಲ. ಆದರೆ, ಬರೋಬ್ಬರಿ 36 ದಿನಗಳ ಬಳಿಕ ತಪಾಸಣಾ ವರದಿ ಬಂದಾಗ ಕೊರೊನಾ ಸೋಂಕು ದೃಢಪಟ್ಟಿದೆ.
ಇಂದು ಸೋಂಕು ಪತ್ತೆಯಾದ ಮೂವರಲ್ಲಿ ಇಬ್ಬರು ಮಾರ್ಚ್ 22ರಂದು ದುಬೈಯಿಂದ ಬಂದಿದ್ದರು. ಏಪ್ರಿಲ್ 17ರಂದು ಇವರ ಗಂಟಲ ದ್ರವವನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಸಾಮಾನ್ಯವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯಂತೆ ಹದಿನಾಲ್ಕು ದಿನ ನಿಗಾದಲ್ಲಿರಬೇಕು. ಆದರೆ ಕೇರಳದಲ್ಲಿ 28 ದಿನ ಗಳ ಕಾಲ ನಿಗಾದಲ್ಲಿರುವಂತೆ ಆರೋಗ್ಯ ಇಲಾಖೆ ಆದೇಶ ನೀಡಿದೆ. ಆದಾಗ್ಯೂ ಸೋಂಕು ದೃಢಪಟ್ಟಿಲ್ಲ. ಇದೀಗ 36 ದಿನಗಳ ಬಳಿಕ ಸೋಂಕು ದೃಢಪಟ್ಟಿರುವುದು ಆರೋಗ್ಯ ಇಲಾಖೆಯನ್ನು ಗಂಭೀರವಾಗಿ ಚಿಂತಿಸುವಂತೆ ಮಾಡಿದೆ.