ವೇಣೂರು, ಮಾ 07 : ಕಣ್ಣಿನಿಂದ ನೀರೀಳಿಯುವುದು ಸಹಜ. ಆದರೆ ಇಲ್ಲೊಬ್ಬ ಬಾಲಕಿಯ ಕಣ್ಣಿನಿಂದ ಸರಸರ ಇರುವೆಗಳು ಇಳಿಯುತ್ತಿರುವುದು ಆಕೆಯ ಕುಂಟುಂಬವನ್ನು ಕಂಗಾಲಾಗಿಸಿದೆ.
ವೇಣೂರು ಸನಿಹದ ಅಂಡಿಂಜೆ ಗ್ರಾಮದ ಗುಡ್ಡಾಡಿ ಮನೆಯ ನಿವಾಸಿ ಅಮ್ಮು ಆಚಾರಿ ಚಂಪಾವತಿ ದಂಪತಿಯ ಪುತ್ರಿ, ನೆಲ್ಲಿಂಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ 11ರ ಹರೆಯದ ಅಶ್ವಿನಿ ಎಂಬ ಬಾಲಕಿಯ ಎಡಗಣ್ಣಿನ ಕೆಳ ಭಾಗದಿಂದ ಪ್ರತಿ ದಿನ ಹಲವು ಸಲ ಸತ್ತ ಇರುವೆಗಳು ಉದುರುತ್ತಿದ್ದು ವೈದ್ಯಲೋಕಕ್ಕೆ ಸವಾಲಾಗಿ ಪರಿಣಮಿಸಿದೆ.
ಬಾಲಕಿಯ ಕಣ್ಣಿನಲ್ಲಿ ಇರುವೆಗಳು ಉದುರುತ್ತಿರುವ ಸಮಸ್ಯೆ ಬೆಳಕಿಗೆ ಬಂದ ಕೂಡಲೇ ಸ್ಥಳೀಯ ವೈದ್ಯರ ಬಳಿ ಕರೆದೊಯ್ದು ಪರೀಕ್ಷಿಸಿದ್ದು ಕಣ್ಣಿಗೆ ಬಿಡುವ ಡ್ರಾಪ್ಸ್ ನೀಡಿದ್ದಾರೆ. ಆಸ್ಪತ್ರೆಗೆ ಹೋದಾಗ ರಾತ್ರಿ ಬಾಲಕಿ ಮಲಗಿರುವ ವೇಳೆ ಕಿವಿಯ ಮೂಲಕ ಸೇರಿಕೊಂಡ ಇರುವೆಗಳು ಕಣ್ಣಿನಿಂದ ಹೊರ ಬರುತ್ತಿರಬಹುದು ಎಂದು ಹೇಳಿ ಧೈರ್ಯ ಹೇಳಿ ಕಳಿಸಿದ್ದು ವೈದ್ಯರ ಸೂಚನೆಯಂತೆ ಡ್ರಾಪ್ಸ್ ಬಿಡುತ್ತಿದ್ದರೂ ಬಾಲಕಿಯ ಕಣ್ಣಿನಿಂದ ಇರುವೆಗಳು ಉದುರುತ್ತಿರುವುದು ನಿಂತಿಲ್ಲ.
ಸ್ಥಳೀಯ ಆಸ್ಪತ್ರೆಯ ವೈದ್ಯರು ನೀಡಿದ ಮದ್ದು ಹಾಕುತ್ತಿದ್ದರೂ ಬಾಲಕಿಯ ಕಣ್ಣಿನಲ್ಲಿ ಇರುವೆಗಳು ಮತ್ತೆ ಮತ್ತೆ ಪತ್ತೆಯಾಗುವುದು ನಿಲ್ಲದಿದ್ದಾಗ ಇನ್ನಷ್ಟು ಗಾಬರಿಗೊಂಡ ಮನೆಯವರು ಶಿರ್ತಾಡಿ ಸನಿಹದ ಜ್ಯೋತಿಷಿಯೊಬ್ಬರ ಬಳಿ ಬಾಲಕಿಯನ್ನು ಕರೆದುಕೊಂಡು ಹೋಗಿ ಕಣ್ಣಿನ ಸಮಸ್ಯೆಯನ್ನು ಹೇಳಿ ಕೊಂಡರು. ಈ ಬಗ್ಗೆ ಜ್ಯೋತಿಷಿ ಎಲ್ಲರಿಗೂ ಹೇಳುವಂತೆ ಎಂದಿನಂತೆ, ನಿಮ್ಮ ಮನೆಯ ಸುತ್ತ ನಾಗಸಂಚಾರವಿದೆ, ನಿಮಗೆ ನಾಗದೋಷವಿದೆ ಎಂದು ತಿಳಿಸಿದ್ದು ಬಾಲಕಿಯ ಹೆತ್ತವರಲ್ಲಿ ಮತ್ತೊಂದು ಆತಂಕ ಮೂಡಲು ಕಾರಣವಾಗಿದೆ. ಇನ್ನೊಂದೆಡೆ ಬಾಲಕಿಯ ಕಣ್ಣಿನಲ್ಲಿ ಪ್ರತಿ ದಿನ ಇರುವೆಗಳು ಉದುರಲು ನಾಗದೋಷವೇ ಕಾರಣವೇ? ಅಥವಾ ವೈದ್ಯರು ಸಂಶಯಪಡುವಂತೆ ಇನ್ನೇನಾದರೂ ಕಾರಣವಿಬಹುದೇ? ಎಂಬ ಕುತೂಹಲ ಸ್ಥಳೀಯರಲ್ಲಿ ಮೂಡಿದೆ.
ಕಳೆದ ಹತ್ತು ದಿನಗಳಿಂದ ಮಗಳ ಕಣ್ಣಿನಿಂದ ಪ್ರತಿ ದಿನ ಆಗಾಗ ಸತ್ತ ಇರುವೆಗಳು ಉದುರುತ್ತಿದ್ದು ಮಂಗಳವಾರ ಮಧ್ಯಾಹ್ನ ಹೊತ್ತು ಅದೇ ಕಣ್ಣಿನಿಂದ ಇರುವೆಗಳು ಉದುರಿವೆ. ಇರುವೆಗಳು ಉದುರಿದಾಗ ಕಣ್ಣಿನಲ್ಲಿ ತುರಿಕೆ, ಉರಿ ಮತ್ತು ನೀರು ತುಂಬುತ್ತದೆ, ಈ ಸಂದರ್ಭ ಬಾಲಕಿಯ ಕಣ್ಣಿನಲ್ಲಿ ನೋವೂ ಬರುತ್ತದೆ. ಇದುವರೆಗೆ 10 ದಿನದಲ್ಲಿ ಸುಮಾರು 60 ಕ್ಕೂ ಹೆಚ್ಚು ಸತ್ತ ಇರುವೆಗಳು ಒಂದೇ ಕಣ್ಣಿನಿಂದ ಉದುರಿದ್ದು ಸಂಗ್ರಹಿಸಿಟ್ಟಿದ್ದೇವೆ ಎಂದು ಅಶ್ವಿನಿಯ ಹೆತ್ತವರು ತಿಳಿಸಿದ್ದಾರೆ.