ಮಲ್ಪೆ, ಏ 22 (Daijiworld News/MSP): ತಾನಿರುವುದು ಪುಟ್ಟ ಗುಡಿಸಲಲ್ಲಿ, ಆದರೆ ಇವರ ಮನಸ್ಸು ಮಾತ್ರ ವಿಶಾಲ..ಸೇವೆಗೆ ನಿಂತರೆ ಇವರನ್ನು ಮೀರಿಸುವವರಿಲ್ಲ . ಕಾರಣ ತಾನೇ ಬಡತನದಲ್ಲಿದ್ದ ಬೇಯುತ್ತಿದ್ದರೂ ಈ ಕಷ್ಟದ ಸಂದರ್ಭ ಯಾವುದೇ ಪ್ರಚಾರವಿಲ್ಲದೆ ತಾನು ಕೂಡಿಟ್ಟ ಹಣದಿಂದ 140 ಮನೆಗೆ ಅಕ್ಕಿ ಹಂಚಿ ಮಾನವೀಯತೆ ಮೆರೆದ ಈ ಮಹಾ ತಾಯಿ ಶಾರದಕ್ಕ.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಅಲ್ಲೋ ಇಲ್ಲೊ ಸಿಕ್ಕಿದ ಮೀನು ಮಾರಿ ಪುಟ್ಟ ಗುಡಿಸಲಲ್ಲಿ ಜೀವನ ಸಾಗಿಸುತ್ತಿರುವ ಶಾರದ ಅವರು ಮಲ್ಪೆ ವಡಬಾಂಡೇಶ್ವರ ವಾರ್ಡ್ ನೆರ್ಗಿ ಯಲ್ಲಿ ಒಟ್ಟು 140 ಮನೆಗಳಿಗೆ ತಲಾ 5 ಕೆಜಿ ಯಂತೆ 700 ಕೆಜಿ ಅಕ್ಕಿ ಹಂಚಿ ಯಾವುದೇ ಪ್ರಚಾರವಿಲ್ಲದೆ ಸೇವೆಯೇ ನನ್ನ ಧರ್ಮ ಅಂತ ಮೌನವಾಗಿಯೇ ತನ್ನ ಮನೆ ಸೇರಿದ್ದಾರೆ.
ನನ್ನ ಕೈಯಲ್ಲಿ ಸಾಧ್ಯವಾದರೆ ಕೊರೊನಾದಂತಹ ಕಷ್ಟದ ಸಮಯದಲ್ಲಿ ಮತ್ತಷ್ಟು ಮಂದಿಗೆ ಅಕ್ಕಿ ದಾನ ನೀಡುವೆ ಅನ್ನುವ ಅವರ ಮಾತು ಸೇವಾ ಮನೋಭಾವ ಕಂಡು ಯಾರಿಗಾದರೂ ಹೆಮ್ಮೆ ಅನ್ನಿಸದೆ ಇರದು. ಕೂಡಿಟ್ಟ ಹಣ ಅಕ್ಕಿ ಹಂಚಿದ್ದು ಮಾತ್ರವಲ್ಲದೇ ತನಗೆ ನ್ಯಾಯಬೆಲೆ ಅಂಗಡಿಯಲ್ಲಿ ದೊರೆತ ಅಕ್ಕಿಯನ್ನೂ ಕೂಡ ತನ್ನ ಮನೆ ವಠಾರದ ಕೂಲಿ ಕಾರ್ಮಿಕರಿಗೆ ಹಂಚಿ ಸೇವೆ ಪದಕ್ಕೆ ಅರ್ಥ ತಂದು ಕೊಟ್ಟಿದ್ದಾರೆ.