ಮಂಗಳೂರು, ಏ 23 (Daijiworld News/MSP): ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟು ಬಳಿಕ ಕೊರೊನಾ ದೃಢವಾದ ಬಂಟ್ವಾಳ ಮಹಿಳೆಯ ಅತ್ತೆಯ ಗಂಟಲ ದ್ರವ ಪರೀಕ್ಷೆಯ ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು, ಇದೀಗ ಅವರಿಗೂ ಕೋವಿಡ್- 19 ಸೋಂಕು ತಗುಲಿರುವುದು ಖಚಿತವಾಗಿದೆ.
75 ವರ್ಷದವರಾಗಿರುವ ಮೃತ ಮಹಿಳೆಯ ಅತ್ತೆಯೂ ಮಾ.18 ರಿಂದ ಪಾರ್ಶ್ವವಾಯುಗೆ ಖಾಯಿಲೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆ ಹಾಗೂ ಇವರ ಸೊಸೆ ಕೊರೊನಾದಿಂದ ಸಾವನ್ನಪ್ಪಿದ ಬಳಿಕ ಬುಧವಾರ ಇವರನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಇದೀಗ ಇವರಲ್ಲೂ ಸೋಂಕು ದೃಢಪಟ್ಟಿದೆ. ಮೃತ ಮಹಿಳೆಯ ಮಕ್ಕಳ ಹಾಗೂ ಪತಿಯ ವರದಿ ನೆಗೆಟಿವ್ ಬಂದಿದೆ. 75 ವರ್ಷದ ವೃದ್ದೆಗೂ ಕೊರೊನಾ ಸೋಂಕು ತಗುಲಿರುವುದರಿಂದ ಜಿಲ್ಲೆಯಲ್ಲಿ ಇದೀಗ ಕೊರೊನಾ ಪೀಡಿತರ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ.ಈ ಪೈಕಿ 12 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಕ್ರಿಯ 4 ಪ್ರಕರಣಗಳಿವೆ.