ಕಾಸರಗೋಡು,ಸೆ18: ಒಂಭತ್ತು ವರ್ಷಗಳ ಹಿಂದೆ ಕಾಸರಗೋಡಿನಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ನಡೆದ ಮುಹಮ್ಮದ್ ಸಿನಾನ್ ಎಂಬಾತನ ಕೊಲೆ ಪ್ರಕರಣದ ಆರೋಪಿಗಳನ್ನು ಕಾಸರಗೋಡು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಫು ನೀಡಿದೆ. 2008ರ ಏಪ್ರಿಲ್ 16 ರಂದು ಕಾಸರಗೋಡು ಗಲಭೆ ಸಂದರ್ಭದಲ್ಲಿ ಸಿನಾನ್ ಹತ್ಯೆ ನಡೆದಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಜೆ.ಪಿ. ಕಾಲನಿಯ ಜ್ಯೋತಿಷ್, ಅಡ್ಕತ್ತಬೈಲ್ ನ ಕಿರಣ್ ಕುಮಾರ್ ಮತ್ತು ಅಣಂಗೂರಿನ ನಿತಿನ್ ಕುಮಾರ್ ಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ರಿಲೀಫ್ ನೀಡಿದೆ. ಇನ್ನು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಕೋರ್ಟ್ ಈ ಹಿಂದೆ ಮೂರು ಬಾರಿ ತೀರ್ಫು ಮುಂದೂಡಿತ್ತು. ನಾಲ್ಕನೇ ಬಾರಿ ಇಂದು ತೀರ್ಫು ಪ್ರಕಟಿಸಿದ್ದು, ಆರೋಪಿಗಳು ಖುಲಾಸೆಗೊಂಡಿದ್ದಾರೆ. ಇನ್ನು ತೀರ್ಪು ಹಿನ್ನಲೆಯಲ್ಲಿ ನ್ಯಾಯಾಲಯ ಮತ್ತು ಪರಿಸರದಲ್ಲಿ ಬಿಗು ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು. ಈ ನಡುವೆ ಜ್ಯೋತಿಷ್ ನನ್ನು ಕೆಲವು ದಿನಗಳ ಹಿಂದೆಯಷ್ಟೇ ಕಾರು ಢಿಕ್ಕಿ ಹೊಡೆಸಿ ಕೊಲೆಗೈಯ್ಯುವ ಯತ್ನವು ನಡೆದಿತ್ತು. ಆ ಬಗ್ಗೆ ಕಾಸರಗೋಡು ಪೊಲೀಸರು ಕೊಲೆಯತ್ನ ಪ್ರಕರಣವನ್ನು ದಾಖಲಿಸಿ ಕೊಂಡಿದ್ದರಲ್ಲದೆ ಡಿಕ್ಕಿ ಹೊಡೆಯಲು ದುಷ್ಕರ್ಮಿಗಳು ಬಳಸಿದ ಕಾರನ್ನು ಪತ್ತೆಹಚ್ಚಿದ್ದರು. ಆದರೆ ಆರೋಪಿಗಳನ್ನು ಇನ್ನೂ ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ.