ಮಂಗಳೂರು, ಮಾ 07 : ಕಲ್ಲಡ್ಕ ಶ್ರೀ ರಾಮ ಶಾಲೆಗೆ ಅನುದಾನ ನಿಲ್ಲಿಸಿರುವ ಸರ್ಕಾರ, ಬೆಂಗಳೂರಿನ ದಾರುಲ್ ಉಲೂಮ್ ಅರೇಬಿಕ್ ಕಾಲೇಜಿಗೆ ಹಣದ ಹೊಳೆಯನ್ನೇ ಹರಿಸಿ ಒಂದು ಸಮುದಾಯ ಒಲೈಕೆಯಲ್ಲಿ ತೊಡಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಅರೇಬಿಕ್ ಕಾಲೇಜಿನ ಅವರಣದಲ್ಲಿರುವ ಧಾರ್ಮಿಕ ಗುರು ಆಶ್ರಫ್ ಸ್ಮಾರಕ ಭವನ ನಿರ್ಮಾಣಕ್ಕೆ ಮತ್ತು ಜಾಮಿಯ ಉಲ್ ಉಲಾಮ ಗ್ರೂಪ್ ಶಾಲಾ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ತಮ್ಮ ಬಜೆಟ್ ನಲ್ಲಿ 20 ಕೋಟಿ ಘೋಷಣೆ ಮಾಡಿದೆ. ಕಲ್ಲಡ ಶ್ರೀ ರಾಮ ಶಾಲೆಯ ಮಕ್ಕಳ ಊಟಕ್ಕೆ ಬರುತ್ತಿದ್ದ ಅನುದಾನ ತಡೆಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಚುನಾವಣೆಗಾಗಿ, ಅರೇಬಿಕ್ ಶಾಲೆಗಳಿಗೆ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಿ ಮತಗಳಿಗೋಸ್ಕರ ಅಲ್ಪಸಂಖ್ಯಾತರ ಒಲೈಕೆಯಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷ ಎಂದು ಹೇಳುತ್ತಲೇ ಲಿಂಗಾಯಿತ, ವೀರಶೈವ ಸಮುದಾಯದ ನಡುವೆ ಬಿರುಕು ಮೂಡಿಸುತ್ತದೆ. ಬಹುಸಂಖ್ಯಾತರನ್ನು ಕಡೆಗಣಿಸಿ ಅಲ್ಪಸಂಖ್ಯಾತರನ್ನು ಒಲೈಸುತ್ತದೆ ಇವೆಲ್ಲವೂ ಕಾಂಗ್ರೆಸ್ ಕೆಟ್ಟ ದೋರಣೆ ಯನ್ನು ತಿಳಿಸುತ್ತದೆ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಲೋಕಾಯುಕ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಲೋಕಾಯುಕ್ತ ಸಂಸ್ಥೆಯನ್ನು ನಿರ್ಜೀವ ಮಾಡಿದ್ದ ಕಾಂಗ್ರೆಸ್ ರಾಜ್ಯದ ಜನರಿಗೆ, ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ . ಈ ಎಲ್ಲಾ ಕಾರಣಗಳಿಂದ ಮುಖ್ಯಮಂತ್ರಿ, ಹಾಗೂ ಗೃಹ ಸಚಿವರು ರಾಜೀನಾಮೆ ಸಲ್ಲಿಸುವುದು ಸೂಕ್ತ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.