ಮಂಗಳೂರು, ಏ 23 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಎರಡನೇ ಬಲಿ ಪಡೆದುಕೊಂಡಿದೆ. ಗುರುವಾರದಂದು ಪಾಸಿಟಿವ್ ದೃಢಪಟ್ಟಿದ್ದ ವೃದ್ಧೆ ಮೃತಪಟ್ಟಿದ್ದಾರೆ. ಅಘಾತಕಾರಿ ಸಂಘತಿಯೆಂದರೆ ಕೊರೊನಾದಿಂದ ಜಿಲ್ಲೆಯಲ್ಲಿ ಮೃತಪಟ್ಟಿರುವುದು ಬಂಟ್ವಾಳದ ಒಂದೇ ಕುಟುಂಬದವರು. ಸೋಮವಾರದಂದು ಸೊಸೆ ಮೃತಪಟ್ಟಿದ್ದು, ಗುರುವಾರದಂದು ಅತ್ತೆ ಮೃತಪಟ್ಟಿದ್ದಾರೆ.
ಬಂಟ್ವಾಳದಲ್ಲಿ ಈ ಹಿಂದೆ ಮೃತಪಟ್ಟಿದ್ದ ಮಹಿಳೆಯ ಅತ್ತೆಯಲ್ಲಿ ಗುರುವಾರದಂದು ಸೋಂಕು ದೃಢಪಟ್ಟಿತ್ತು. ಅದರಂತೆ ವೆನ್ಲಾಕ್ ಅಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ 75ರ ಹರೆಯದ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂಧಿಸದೆ ಸಂಜೆ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಏಪ್ರಿಲ್ 20ರಂದು ಬಂಟ್ವಾಳ ಮೂಲದ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟು ಬಳಿಕ ಅವರಲ್ಲಿ ಕೊರೊನಾ ದೃಢಪಟ್ಟಿತ್ತು. ಅವರ ಅತ್ತೆಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಗಂಟಲ ದ್ರವ ಪರೀಕ್ಷೆಗೆ ರವನಿಸಲಾಗಿತ್ತು. ಏಪ್ರಿಲ್ 23ರ ಗುರುವಾರದಂದು ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಮಧ್ಯಹ್ನ ಆರೋಗ್ಯ ಇಲಾಖೆಯ ಕೈ ಸೇರಿತ್ತು, ಆದರೆ, ಇದೀಗ ಸಂಜೆ ಅವರು ಮೃತಪಟ್ಟಿರುವ ವರದಿ ಲಭ್ಯವಾಗಿದೆ. ಆ ಮೂಲಕ ಬಂಟ್ವಾಳದ ಒಂದೇ ಕುಟುಂಬದ ಇಬ್ಬರನ್ನು ಅತ್ತೆ ಹಾಗೂ ಸೊಸೆಯನ್ನು ಕೊರೊನ ಬಲಿ ಪಡೆದುಕೊಂಡಿದೆ.
ಮೃತ ಮಹಿಳೆಯ ಅತ್ತೆಯೂ ಮಾ.18ರಿಂದ ಪಾರ್ಶ್ವವಾಯು ಖಾಯಿಲೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆ ಹಾಗೂ ಇವರ ಸೊಸೆ ಕೊರೊನಾದಿಂದ ಸಾವನ್ನಪ್ಪಿದ ಬಳಿಕ ಬುಧವಾರ ಇವರನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.