ಮಂಗಳೂರು, ಏ 23 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದಾಗಿ ಗುರುವಾರದಂದು ಮೃತಪಟ್ಟ ಮಹಿಳೆಯ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲು ಪಚ್ಚನಾಡಿಯಲ್ಲಿರುವ ರುದ್ರಭೂಮಿಯಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದು, ಇದೀಗ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ನಡುವೆಯೇ ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ ಭೇಟಿ ನೀಡಿದ್ದು, ಶಾಸಕರು ಜನರ ಬೆಂಬಲಕ್ಕೆ ನಿಂತಿದ್ದಾರೆ.
ಕೊರೊನಾದಿಂದ ಮೃತಪಟ್ಟಿರುವ ಮಹಿಳೆಯ ಶವ ಸಂಸ್ಕಾರ ನಡೆಸಲು ಪಚ್ಚನಾಡಿಯಲ್ಲಿರುವ ರುದ್ರಭೂಮಿಯಲ್ಲಿ ತಯಾರಿ ನಡೆಸುತ್ತಿರುವಾಗಲೇ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಸುದ್ದಿ ತಿಳಿದ ಶಾಸಕ ಭರತ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನನ್ನ ವ್ಯಾಪ್ತಿಯಲ್ಲಿ ಶವ ಸಂಸ್ಕಾರ ನಡೆಸುವ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ. ಅಲ್ಲದೆ ಸ್ಥಳೀಯ ಕಾರ್ಪೊರೇಟರ್ ಗಮನಕ್ಕೂ ತಂದಿಲ್ಲ. ಶವಸಂಸ್ಕಾರ ನಡೆಸಿದ್ದಲ್ಲಿ ಏನಾಗುತ್ತದೆ ಎಂಬುವುದು ಈ ಸಂದರ್ಭದಲ್ಲಿ ಮುಖ್ಯವಲ್ಲ. ಆ ಬಗ್ಗೆ ನನಗೆ ಸ್ಪಷ್ಟವಾದ ಮಾಹಿತಿ ಇದೆ. ಶವ ಸಂಸ್ಕಾರ ನಡೆಸಿದ್ದಲ್ಲಿ ಜನತೆಗೆ ಯಾವುದೇ ತೊಂದರೆ ಇಲ್ಲ. ಆದರೆ, ನನ್ನ ಗಮನಕ್ಕೆ ತರದೆ ವ್ಯವಸ್ಥೆ ಮಾಡಲಾಗಿದೆ. ನನ್ನ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಕೊರೊನಾದಿಂದ ಮೃತಪಟ್ಟ ಮಹಿಳೆಯ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂಬುವುದಾಗಿ ಖಡಖಂಡಿತವಾಗಿ ಶಾಸಕ ಭರತ್ ಶೆಟ್ಟಿ ನುಡಿದಿದ್ದಾರೆ.
ಇನ್ನು ಈ ಬಗ್ಗೆ ಕಮಿಷನರ್ ಡಾ. ಹರ್ಷ ಅವರಲ್ಲಿ ಮಾತುಕತೆ ನಡೆಸಿದ್ದೇನೆ. ಅಲ್ಲದೆ, ಜಿಲ್ಲಾಧಿಕಾರಿಗಳೊಂದಿಗೂ ಮಾತುಕತೆ ನಡೆಸಿದ್ದೇನೆ. ಅವರು ಅರ್ಥ ಮಾಡಿಕೊಳ್ಳಲಿದ್ದಾರೆ. ನನ್ನ ವಿಧಾನಸಭಾ ವ್ಯಾಪ್ತಿಯಲ್ಲಿ ನನ್ನ ಗಮನಕ್ಕೆ ತರದೆ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ.