ಮಂಗಳೂರು, ಏ 23 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಎರಡನೇ ಬಲಿಯಾಗಿರುವ ಬೆನ್ನಲ್ಲೇ ಜಿಲ್ಲೆಯ ಯಾವುದೇ ಕಾರಣಕ್ಕೂ ಲಾಕ್ ಡೌನ್ ಸಡಿಲಿಕೆ ಇಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಸಂಬಂಧಿಸಿದಂತೆ ಬುಧವಾರದಂದು ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶ ನೀಡಿದ್ದರು. ಕೆಲವೊಂದು ಹೊಸ ನಿರ್ಬಂಧಗಳೊಂದಿಗೆ ಕೆಲವು ವ್ಯಾಪ್ತಿಗಳಿಗೆ ಸಡಿಲಿಕೆ ನೀಡಲಾಗಿತ್ತು. ಆದರೆ, ದ.ಕ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಹಾಗೂ ಈಗಾಗಲೇ ಹಾಟ್ ಸ್ಪಾಟ್ ಆಗಿರುವ ಕಾರಣ ನಿಯಮ ಸಡಿಲಿಕೆಯ ಬಗ್ಗೆ ನಿರ್ಧಾರ ಕೈಗೊಂಡಿರಲಿಲ್ಲ.
ಗುರುವಾರದಂದು ಸಂಸದರು, ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುವ ಬಗ್ಗೆ ಉಸ್ತುವಾರಿ ಸಚಿವರು ತಿಳಿಸಿದ್ದರು. ಆದರೆ, ಈ ನಡುವೆ ಗುರುವಾರದಂದು ಬಂಟ್ವಾಳ ಮೂಲದ ಮತ್ತೊಂದು ಮಹಿಳೆಯ ಸಾವು ಸಂಭವಿಸಿದೆ. ಈ ಕಾರಣದಿಂದಾಗಿ ನಿಯಮ ಸಡಿಲಿಕೆಗೊಳಿಸುವ ಯಾವುದೇ ಪ್ರಶ್ನೆ ಇಲ್ಲ ಎಂಬುವುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಕೇಂದ್ರ ಸರಕಾರ ಘೋಷಣೆ ಮಾಡಿರುವಂತೆ ಮೇ 3ರ ತನಕ ದ.ಕ. ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರೆಯಲಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ತನಕ ಸಾಮಾಜಿಕ ಅಂತರದೊಂದಿಗೆ ಅಗತ್ಯ ವಸ್ತುಗಳ ಖರೀದಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಹಾಗೂ ಅಗತ್ಯ ವಸ್ತುಗಳ ಅಂಗಡಿಗಳು, ಮೆಡಿಕಲ್ ಶಾಪ್ ಗಳು, ಆಸ್ಪತ್ರೆಗಳು ಎಂದಿನಂತೆ ಸೇವೆ ನೀಡಲಿವೆ.