ಮಂಗಳೂರು, ಮಾ 08 : ಮೇಯರ್ ಆಗಿ ಅಧಿಕಾರ ವಹಿಸಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಮೇಯರ್ ಸ್ಥಾನದಲ್ಲಿದ್ದು ಸಾರ್ವಜನಿಕರಿಗೆ ನನ್ನಿಂದಾದ ಸೇವೆ ಒದಗಿಸಲು ನನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಎಂದು ನಿರ್ಗಮಿತ ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ. ಈ ಬಗ್ಗೆ ಅವರ ಕೊಠಡಿಯಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ತಮ್ಮ ಅಧಿಕಾರಾವಧಿಯಲ್ಲಿ 180 ಕೋಟಿ ರೂ.ಗಳಿಗೂ ಅಧಿಕ ಅಂದಾಜು ವೆಚ್ಚದ ಕಾಮಗಾರಿಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ಅಧಿಕಾರ ಸ್ವೀಕರಿಸಿದ ಸಂದರ್ಭ ಎದುರಾಗಿದ್ದು ನೀರಿನ ಸಮಸ್ಯೆ, ಫೋನ್ ಇನ್ ಕಾರ್ಯಕ್ರಮದ ಮೂಲಕ ತಕ್ಷಣ ಬಗೆಹರಿಸಬಹುದಾದ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ. ಮಸಾಜ್ ಪಾರ್ಲರ್, ಸ್ಕಿಲ್ ಗೇಮ್ಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂಬ ಇರಾದೆಯೊಂದಿಗೆ ಸಾಕಷ್ಟು ದಾಳಿಗಳನ್ನು ನಡೆಸಲಾಯಿತಾದರೂ ನ್ಯಾಯಾಲಯದ ತಡೆಯಿಂದಾಗಿ ಅದು ಸಂಪೂರ್ಣವಾಗಿ ಸಾಧ್ಯವಾಗಿಲ್ಲ ಎಂಬ ಬೇಸರ ಇದೆ. ಈ ಬಗ್ಗೆ ಸಂಬಂಧಪಟ್ಟವರಿಂದ ಸಂಪೂರ್ಣ ಸಹಕಾರ ದೊರಕಿದ್ದರೆ ಇದು ಸಾಧ್ಯವಾಗುತ್ತಿತ್ತು. ಅದು ಸಂಪೂರ್ಣವಾಗಿ ನಿಲ್ಲಬೇಕು ಎಂದು ಇದೇ ವೇಳೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ರಜನೀಶ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯ್ಷೆ ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.