ಮಂಗಳೂರು, ಏ 23 (DaijiworldNews/SM): ಕೊರೊನಾ ಸೋಂಕಿನಿಂದ ಮೃತಪಟ್ಟ ಬಂಟ್ವಾಳ ತಾಲೂಕಿನ 75 ವರ್ಷದ ಮಹಿಳೆಯ ಶವ ಸಂಸ್ಕಾರಕ್ಕೆ ಜಿಲ್ಲಾಡಳಿತ ಅತಂತ್ರ ಸ್ಥಿತಿಗೆ ತಲುಪಿದಂತಾಗಿದೆ. ಮಹಿಳೆಯ ಶವ ಸಂಸ್ಕಾರವನ್ನು ಮೂಡುಶೆಡ್ಡೆಯ ರುದ್ರಭೂಮಿಯಲ್ಲಿ ನಡೆಸಲಾಗುತ್ತದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಮೂಡುಶೆಡ್ಡೆಯ ರುದ್ರಭೂಮಿಯ ಬಳಿಗೆ ಸ್ಥಳೀಯರು ಜಮಾಯಿಸಿ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೊರೊನಾ ಸೋಂಕಿತ ಮಹಿಳೆಯ ಶವ ಸಂಸ್ಕಾರದ ಬಗ್ಗೆ ಸ್ಥಳೀಯರಲ್ಲಿ ಆತಂಕ ಮೂಡಿದೆ.
ಆ ಮೂಲಕ ಮಹಿಳೆಯ ಶವ ಸಂಸ್ಕಾರದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸ್ಪಷ್ಟ ನಿರ್ಧಾರವಿಲ್ಲದೆ, ಶವದೊಂದಿಗೆ ತಿರುಗಾಡುವ ಪರಿಸ್ಥಿತಿ ಎದುರಾಗಿದೆ. ಮತ್ತೊಂದೆಡೆ ಜಿಲ್ಲಾಡಳಿತ ಕೈಗೊಂಡ ನಿರ್ಧಾರಕ್ಕೆ ಕವಡೆ ಕಾಸಿನ ಬೆಲೆ ಇಲ್ಲದಂತಾಗಿದೆ.
ಇನ್ನು ಈ ಮುಂಚೆ ಗುರುವಾರ ಸಂಜೆ ಸೋಂಕಿತ ಮಹಿಳೆಯ ಶವಸಂಸ್ಕಾರಕ್ಕಾಗಿ ಜಿಲ್ಲಾಡಳಿತ ಪಚ್ಚನಾಡಿ ಶವಾಗಾರದಲ್ಲಿ ಸಿದ್ಧತೆ ನಡೆಸಿತ್ತು. ಆದರೆ, ಸ್ಥಳೀಯ ಸಾರ್ವಜನಿಕರು ಹಾಗೂ ಸ್ಥಳೀಯ ಶಾಸಕರ ವಿರೋಧದಿಂದ ಶವ ಸಂಸ್ಕಾರ ನಡೆಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ಜಿಲ್ಲಾಡಳಿತ ತನ್ನ ನಿರ್ಧಾರ ಬದಲಿಸಿ ಮೂಡುಶೆಡ್ಡೆಯಲ್ಲಿ ಅಂತ್ಯಸಂಸ್ಕಾರ ನಡೆಸಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಸ್ಥಳೀಯರು ಜಮಾಯಿಸಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್ ವಿರೋಧ:
ಇನ್ನು ಮೂಡುಶೆಡ್ಡೆಯ ಸ್ಮಶಾನದ ಸುತ್ತ ಮನೆಗಳಿವೆ. ಅದರಲ್ಲೂ ಕೊರೊನಾದಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದೆ. ಜನರು ಹೆಚ್ಚಾಗಿರುವ ಪ್ರದೇಶಕ್ಕೆ ಕೊರೊನಾ ಮೃತದೇಹ ತರುವುದು ಸರಿಯಲ್ಲ. ಇಷ್ಟು ದಿನಗಳ ಕಾಲ ಮನೆಯಲ್ಲಿದ್ದುಕೊಂಡು ನಾವು ಲಾಕ್ ಡೌನ್ ನಿಯಮಕ್ಕೆ ಸಹಕಾರ ನೀಡಿದ್ದೇವೆ. ಆದರೆ, ಇಂತಹ ತಪ್ಪು ನಿರ್ಧಾರಗಳಿಂದ ಜನರ ಹಾದಿ ತಪ್ಪಿಸಲು ಅವಕಾಶ ನೀಡುವುದಿಲ್ಲ. ಅದರಲ್ಲೂ, ಮೃತ ವ್ಯಕ್ತಿ ಬಂಟ್ವಾಳದವರು. ಬಂಟ್ವಾಳದಲ್ಲೇ ಶವಸಂಸ್ಕಾರವನ್ನು ನಡೆಸಬೇಕು. ಯಾವುದೇ ಕಾರಣಕ್ಕೂ ಮೂಡುಶೆಡ್ಡೆಯಲ್ಲಿ ಶವಸಂಸ್ಕಾರ ನಡೆಸಲು ಅವಕಾಶ ನೀಡುವುದಿಲ್ಲ ಎಂಬುವುದಾಗಿ ಶಾಸಕ ಉಮಾನಾಥ್ ಕೋಟ್ಯಾನ್ ಸ್ಪಷ್ಟಪಡಿಸಿದ್ದಾರೆ.