ಮಂಗಳೂರು, ಏ 24(Daijiworld News/MSP): ಪವಿತ್ರ ರಮ್ಜಾನ್ ನ ಪ್ರಥಮ ಚಂದ್ರ ದರ್ಶನವು ಗುರುವಾರ ಕೇರಳಾದ ಕಾಪಾಡ್ ನಲ್ಲಿ ಆಗಿರುವುದರಿಂದ ಮುಸ್ಲಿಮರ ಪವಿತ್ರ ಮಾಸ ‘ರಮ್ಜಾನ್’ ಶುರುವಾಗಿದ್ದು, ಒಂದು ತಿಂಗಳ ‘ರೋಜಾ’ (ಉಪವಾಸ) ಇಂದಿನಿಂದ (ಶುಕ್ರವಾರ) ಆರಂಭಗೊಳ್ಳಲಿದೆ.
ಚಂದ್ರ ದರ್ಶನ ಆಗಿರುವುದರಿಂದ ದ.ಕ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕಾ ಅಹ್ಮದ್ ಮುಸ್ಮಿಯರ್ ಮತ್ತು ಉಡುಪಿ ಸಂಯುಕ್ತ ಖಾಝಿ ಅಲ್ ಹಾಜ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಅವರು ಈ ಬಗ್ಗೆ ಕರೆ ನೀಡಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಲಾಕ್ ಡೌನ್ ರಮ್ಝಾನ್ ಮಾಸದ ಮೇಲೂ ಪರಿಣಾಮ ಬೀರಿರುವುದರಿಂದ ಧಾರ್ಮಿಕ ವಿಧಿ ವಿಧಾನಗಳನ್ನು ತಮ್ಮ ಮನೆಯಲ್ಲೇ ಆಚರಿಸುವಂತೆ ಧಾರ್ಮಿಕ ಮುಖಂಡರು ಮನವಿ ಮಾಡಿದ್ದಾರೆ.
ರಮ್ಜಾನ್ ಮಾಸದಲ್ಲಿ ಪ್ರತಿನಿತ್ಯ ಬೆಳಿಗ್ಗೆ 4.30 ಗಂಟೆಯೊಳಗಾಗಿ ‘ಸಹರಿ’ ಊಟ ಮಾಡಿ, ನಂತರ ಬೆಳಿಗ್ಗೆ 5 ಗಂಟೆಗೆ ‘ಫಜರ್’ ನಮಾಜ್ ಮಾಡಿಕೊಂಡು ತಮ್ಮ ನಿತ್ಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಸಂಜೆ 7.30 ಕ್ಕೆ ‘ಮಗರೀಫ್’ ನಮಾಜ್ ವೇಳೆಗೆ ಎಲ್ಲ ಮುಸ್ಲಿಮರು ಒಗ್ಗೂಡಿ ಮಸೀದಿಗೆ ತೆರಳಿ ತಮ್ಮ ದಿನ ಉಪವಾಸವನ್ನು (ಇಫ್ತಿಯಾರ್) ಬಿಡುತ್ತಾರೆ. ಕೊರೊನಾ ಹರಡದಂತೆ ನಿರ್ಬಂಧಗಳನ್ನು ಹೇರಿರುವುದರಿಂದ ಬಾರಿ ಈ ವಿಧಿವಿಧಾನ ಮನೆಯಲ್ಲೇ ಆಚರಿಸುವಂತೆ ಧಾರ್ಮಿಕ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.