ಬಂಟ್ವಾಳ, ಏ 24(Daijiworld News/MSP): ಒಂದೆಡೆ ಸಾಂಕ್ರಮಿಕ ರೋಗವನ್ನು ನಿಯಂತ್ರಣದಲ್ಲಿಡಲು ಸರ್ಕಾರ ತನ್ನ ಕೈ ಮೀರಿ ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಕೊರೊನಾ ನಿಯಂತ್ರಿಸಲು ಸಹಕರಿಸಬೇಕಾಗಿದ್ದ ಸರಕಾರಿ ಅಧಿಕಾರಿಯ ಬೇಜವಾಬ್ದಾರಿಯಿಂದ ನಡವಳಿಕೆಯಿಂದ ಕೊರೊನಾ ಹಾಟ್ ಸ್ಪಾಟ್ ಎಣಿಸಿರುವ ಬಂಟ್ವಾಳದಲ್ಲಿ ವೈರಸ್ ಮತ್ತಷ್ಟು ಜನರಿಗೆ ಹರಡುವ ಆತಂಕ ಎದುರಾಗಿದೆ.
ಪುರಸಭಾ ಮುಖ್ಯಾಧಿಕಾರಿಯ ಗಮನಕ್ಕೆ ತಾರದೆ ಜ್ವರ ಪರೀಕ್ಷೆಗಿಳಿದ ಬಂಟ್ವಾಳ ಪುರಸಭೆಯ ಪರಿಸರ ಅಭಿಯಂತರರಾದ ಯಾಸ್ಮೀನ್ ಸುಲ್ತಾನ್ ಕೋವಿಡ್ -19 ಪರೀಕ್ಷೆಯ ವಿಚಾರದಲ್ಲಿ ಬೇಜವಾಬ್ದಾರಿ ನಡವಳಿಕೆ ತೋರಿದ್ದಾರೆ. ಒಂದೇ ಥರ್ಮೋಮೀಟರ್ ನಲ್ಲಿ ಹಲವು ಪೌರ ಕಾರ್ಮಿಕರ ಜ್ವರ ಪರೀಕ್ಷೆ ನಡೆಸಿದ್ದಾರೆ. ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಒಂದೇ ಥರ್ಮೋಮೀಟರ್ ಇಟ್ಟು ಫಿವರ್ ಟೆಸ್ಟ್ ನಡೆಸಿದ್ದಾರೆ.
ಕುದಿಯುವ ನೀರಿನಲ್ಲಿ ಥರ್ಮೋಮೀಟರ್ ಹಾಕಿ ಬಳಿಕ ಇನ್ನೊಬ್ಬರಿಗೆ ಬಳಸುವಂತೆ ನಿಯಮವಿದೆ. ಆದರೆ ಇದ್ಯಾವುದನ್ನು ನಡೆಸದೆ ಕಾಟಚಾರಕ್ಕೂ ಎಂಬಂತೆ ಬಹುದೊಡ್ಡ ನಿರ್ಲಕ್ಷ್ಯವನ್ನು ಅಧಿಕಾರಿ ಯಾಸ್ಮಿನ್ ಮಾಡಿದ್ದಾರೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆದ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಯಾಸ್ಮೀನ್ಗೆ ಕಾರಣ ನೀಡುವಂತೆ ನೋಟಿಸ್ ನೀಡಿದ್ದಾರೆ.
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಹಾಟ್ಸ್ಪಾಟ್ ಆಗಿದ್ದು, ಇಲ್ಲಿ ಕೊರೊನಾದಿಂದ ಇಬ್ಬರು ಮೃತಪಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ಬೇಜವಾಬ್ದಾರಿ ವರ್ತನೆ ತೋರಿದ್ದು ಸರಿಯಲ್ಲ, ನಿಯಮವನ್ನು ಗಾಳಿಗೆ ತೂರಿ ನಿರ್ಲಕ್ಷ್ಯ ಮಾಡಿದ್ದರ ವಿರುದ್ದ ಮುಖ್ಯಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೇಜವಾಬ್ದಾರಿ ವರ್ತನೆ ತೋರಿದ ನಿಮ್ಮ ಮೇಲೆ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್ ನೀಡಿದ್ದು,ಮೂರು ದಿನದ ಒಳಗೆ ಲಿಖಿತ ಸಮಜಾಯಿಷಿ ನೀಡುವಂತೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಆದೇಶ ನೀಡಿದ್ದಾರೆ.