ಉಡುಪಿ, ಎ.24 (Daijiworld News/MB) : ಭಟ್ಕಳದ ಕೊರೊನಾ ಸೋಂಕಿತ ಮಹಿಳೆ ಗುಣಮುಖರಾಗಿದ್ದು ಶುಕ್ರವಾರ ಮಧ್ಯಾಹ್ನ ಉಡುಪಿಯ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸೋಂಕಿತೆ ಮಹಿಳೆಯು ಗುಣಮುಖರಾಗಿ ಬಿಡುಗಡೆಯಾದ ಸಂದರ್ಭದಲ್ಲಿ ಮಹಿಳೆಗೆ ಮಲ್ಲಿಗೆ ಹೂವು, ಹಣ್ಣು ಹಂಪಲು ಹಾಗೂ ಸಿಹಿ ತಿಂಡಿಗಳನ್ನು ನೀಡಲಾಯಿತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಗರ್ಭಿಣಿ ಮಹಿಳೆ ಗುಣಮುಖರಾಗಿ ಬಿಡುಗಡೆಯಾಗಿರುವುದು ಉಡುಪಿ ಜಿಲ್ಲೆಗೆ ಶುಭ ಸುದ್ದಿ. ಈ ದಿನ ಶುಭದಿನ. ಸೋಂಕಿತೆಗೆ ಚಿಕಿತ್ಸೆ ನೀಡುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಷ್ಟ ಎಂದು ಉಡುಪಿಗೆ ಕರೆತಂದಿದ್ದು ಇದನ್ನು ಸವಾಲಾಗಿ ಸ್ವೀಕರಿಸಿ ಚಿಕಿತ್ಸೆ ನೀಡಲಾಗಿದೆ. ಮಹಿಳೆ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದು ಮನೆಗೆ ವಾಪಾಸ್ ತೆರಳಿದ್ದಾರೆ ಎಂದು ತಿಳಿಸಿದ್ದಾರೆ.
26ರ ಹರೆಯದ ಕೊರೊನಾ ಸೋಂಕಿತೆ ಗರ್ಭಿಣಿಯ ಪತಿಯು ಗಲ್ಫ್ ದೇಶದಿಂದ ಮರಳಿದ್ದು ಪತ್ನಿಗೆ ಸೋಂಕು ತಗುಲಿತ್ತು. ಸೋಂಕಿತೆ ಗರ್ಭಿಣಿಯಾದ ಕಾರಣದಿಂದಾಗಿ ಈ ಪ್ರಕರಣದ ಮೇಲೆ ಹೆಚ್ಚಿನ ನಿಗಾ ವಹಿಸಿ ಉಡುಪಿ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನು ಆಸ್ಪತ್ರೆಯಲ್ಲಿ ತನಗೆ ನೀಡಿದ ಉತ್ತಮ ಸೇವೆಗಾಗಿ ಗರ್ಭಿಣಿ ಮಹಿಳೆಯು ವೈದ್ಯರು, ನರ್ಸ್ಗಳು ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದ್ದು, ತಾನು ಇಲ್ಲಿಗೆ ಬರುವ ಮೊದಲು ತುಂಬಾ ಭಯ ಇತ್ತು, ಇಲ್ಲಿಗೆ ಬಂದ ಬಳಿಕ ಇಲ್ಲಿನ ವೈದ್ಯರು ಮತ್ತು ನರ್ಸ್ ಗಳು ನನ್ನಲ್ಲಿದ್ದ ಭಯ ದೂರ ಮಾಡಿ, ತನಗೆ ಧೈರ್ಯ ತುಂಬಿದರು, ನನಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದು, ಇಲ್ಲಿ ಅತ್ಯುತ್ತಮ ರೀತಿಯ ಚಿಕಿತ್ಸೆ ನೀಡಿದ್ದಾರೆ. ಮನೆಯಲ್ಲಿಯೇ ಚಿಕಿತ್ಸೆ ಪಡೆದಂತೆ ಅನಿಸಿದೆ, ಪ್ರಸ್ತುತ ನಾನು ಸಂಪೂರ್ಣ ಗುಣಮುಖಳಾಗಿದ್ದು, ದೇವರಿಚ್ಚೆಯಿದ್ದರೆ ಮುಂದೆ ನನ್ನ ಹೆರಿಗೆಗೆ ಸಹ ಉಡುಪಿಗೆ ಆಗಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ. ಪಂ. ಸಿಇಒ ಪ್ರೀತಿ ಗೆಹ್ಲೋಟ್, ಡಿಎಚ್ಒ, ಎಸ್ಪಿ ವಿಷ್ಣುವರ್ದನ್ ಮುಂತಾದವರು ಉಪಸ್ಥಿತರಿದ್ದರು.