ಬಂಟ್ವಾಳ, ಎ.24 (Daijiworld News/MB) : ಕೊರೊನಾ ಸೋಂಕಿತ ಮಹಿಳೆಯ ಶವ ದಹನ ಮಾಡಿದ ಬಿ.ಸಿ.ರೋಡಿನ ಕೈಕುಂಜೆ ಹಿಂದೂ ರುದ್ರ ಭೂಮಿಗೆ ಶಾಸಕ ರಾಜೇಶ್ ನಾಯ್ಕ್ ಹಾಗೂ ತಾಲೂಕಿನ ಉನ್ನತ ಅಧಿಕಾರಿಗಳು ಇಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಕೊರೊನಾ ಸೋಂಕಿತ ಮೃತ ಮಹಿಳೆಯ ಶವ ಸಂಸ್ಕಾರಕ್ಕೆ ಹಲವು ಪ್ರದೇಶಗಳಲ್ಲಿ ಅವಕಾಶ ನೀಡದೇ ಕೊನೆಗೆ ಕೈಕುಂಜೆಯ ಹಿಂದೂ ರುದ್ರ ಭೂಮಿಯಲ್ಲಿ ತಡರಾತ್ರಿ ಸುಮಾರು 2 ಗಂಟೆಗೆ ಶವವನ್ನು ದಹನ ಮಾಡಲಾಯಿತು. ಇಂದು ಬೆಳಿಗ್ಗಿನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಊಹಾಪೋಹಗಳು ಹರಿದಾಡುತ್ತಿದ್ದು ಸ್ಥಳೀಯ ನಿವಾಸಿಗಳು ಆತಂಕಕ್ಕೀಡಾಗಿದ್ದರು.
ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ಪುರಸಭೆ ಅಧಿಕಾರಿಗಳು ಪೌರಕಾರ್ಮಿಕರ ಜತೆ ತೆರಳಿ ಸ್ಯಾನಿಟೈಸರ್ ಸಿಂಪಡಿಸಿದ್ದು ಮಧ್ಯಾಹ್ನದ ವೇಳೆಗೆ ಪರಿಸರದಲ್ಲಿ ಕ್ರಿಮಿನಾಶಕ ದ್ರಾವಣ ಸಿಂಪಡಿಸಲಾಯಿತು.
ಈ ಸಂಧರ್ಭದಲ್ಲಿ ಸ್ಥಳದಲ್ಲಿ ಸೇರಿದ್ದ ಸ್ಥಳೀಯರು ಪರಿಸರವನ್ನು ಪರಿಶೀಲಿಸಿದ್ದು ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿದರು.
ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಕಂದಾಯ ನಿರೀಕ್ಷಕರಾದ ನವೀನ್, ರಾಮ ಕಾಟಿಪಳ್ಳ, ದಿವಾಕರ್, ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ , ಪುರುಷೋತ್ತಮ ಉಪಸ್ಥಿತರಿದ್ದರು.