ಬೆಳ್ತಂಗಡಿ, ಏ 24(Daijiworld News/MSP): ಜಿಲ್ಲೆಯಲ್ಲಿ ಕೋವಿಡ್ ನಿಂದ ಮೃತ ಪಟ್ಟ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡದೆ ತಡರಾತ್ರಿಯ ವರೆಗೆ ಜಿಲ್ಲಾಡಳಿತವನ್ನು ತಡೆದ ಜಿಲ್ಲೆಯ ಶಾಸಕರುಗಳ ವಿರುದ್ದ ಕೂಡಲೇ ಸರಕಾರ ಕೇಸು ದಾಖಲಿಸಿ ಬಂಧಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೃತದೇಹವನ್ನು ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಬೇಕಾಗಿದೆ. ಅಲ್ಲಿ ಯಾವುದೇ ರೀತಿಯಲ್ಲಿ ಸೋಂಕು ಹರಡುವ ಸಾಧ್ಯತೆಗಳಿಲ್ಲ ಆದರೂ ಉದ್ದೇಶ ಪೂರ್ವಕವಾಗಿ ಜವಾಬ್ದಾರಿಯಿರುವ ಶಾಸಕರೇ ಮುಂದೆ ನಿಂತು ಅದನ್ನು ತಡೆದಿದ್ದಾರೆ ಇದು ಬಹಳ ಬೇಸರದ ವಿಚಾರವಾಗಿದೆ, ಇದು ಕೊರೋನಾ ವಿರುದ್ದದ ಹೋರಟಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದರು.
ರಾಜ್ಯ ಸರಕಾರ ವೈದ್ಯಕೀಯ ಸಿಬಂದಿಗಳಿಗೆ ತರಿಸಿರುವ ಕಿಟ್ ಗಳು ಕಳಪೆ ಗುಣಮಟ್ಟದ್ದಾಗಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿದ್ದು ಇದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಇದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೇವಲ ಹಿತೋಪದೇಶದಿಂದ ಏನೂ ಸಾದನೆಯಾಗದು. ಸರಕಾರ ಕೂಡಲೇ ಜನರ ಅಗತ್ಯಗಳಿಗೆ ಸ್ಪಂದಿಸುವಕಾರ್ಯವನ್ನು ಮಾಡಬೇಕಾಗಿದೆ. ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯಿದೆ ಸರಕಾರ ಕೂಡಲೇ ಕೇರಳ ಸರಕಾರ ನೀಡಿರುವ ರೀತಿಯಲ್ಲಿ ಎಲ್ಲ ಕುಟುಂಬಗಳಿಗೂ ಅಗತ್ಯ ದಿನಬಳಕೆಯ ಸಾಮಾಗ್ರಿಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರಕಾರವೂ ರಾಜ್ಯದ ನೆರವಿಗೆ ಬಂದಿಲ್ಲ ಎಂದು ಆರೋಪಿಸಿದ ಅವರು ರಾಜ್ಯದ ಸಂಸದರುಗಳು ಕೇಂದ್ರ ಸರಕಾರದಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ ಎಂದರು.
ಸರಕಾರವು ಆರ್ಥಿಕ ತೊಂದರೆಗೀಡಾಗಿರುವುದು ಅರಿವಿದೆ. ಆದರೆ ಇಂದು ಕೃಷಿಕರು ಬಹಳಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ೨೨ ಸಾವಿರ ಕೋಟಿ ಸಬ್ಸಿಡಿಯನ್ನ ಕೇಂದ್ರ ಸರಕಾರ ವಾಪಸಾತಿ ಮಾಡಿದೆ. ಕೃಷಿಕರಿಗೆ ನೀಡುವ ಸಬ್ಸಡಿ ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು. ಮತ್ತೊಂದೆಡೆ ಸರಕಾರಿ ನೌಕರರಿಗೆ ಏಕಮಾತ್ರ ಭದ್ರತೆ ತುಟ್ಟಿ ಭತ್ತೆಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದು ಎಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಕೇಂದ್ರದ ಬಳಿ ಅಕ್ಕಿ ಹೆಚ್ಚಾಗಿದ್ದರೆ ಅದನ್ನು ಬಡವರಿಗೆ ನಿರ್ಗತಿಕರಿಗೆ ನೀಡಲಿ ದೇಶದಾಧ್ಯಂತ ಎಷ್ಟೋ ಜನರು ಆಹಾರವಿಲ್ಲದೆ ಪರದಾಡುತ್ತಿದ್ದಾರೆ ಅವರಿಗೆ ನೀಡದೆ ಅದನ್ನು ಸಾನಿಟೈಸರ್ ಮಾಡಲು ಬಳಸುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಅವರೊಂದಿಗೆ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಶೈಲೇಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಣ ಅಭಿನಂದನ್, ಕಾಂಗ್ರಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಕೆ ವಸಂತ್ ಇದ್ದರು.