ಉಡುಪಿ, ಏ 24 (DaijiworldNews/SM): ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಭಟ್ಕಳ ಮೂಲದ ಗರ್ಭಿಣಿ ಸೋಂಕಿನಿಂದ ಗುಣಮುಖರಾಗಿ ತಮ್ಮ ಮನೆಗೆ ತೆರಳಿದ್ದಾರೆ. ಆ ಮೂಲಕ ಉಡುಪಿ ಜಿಲ್ಲೆ ಮತ್ತೊಮ್ಮೆ ದೇಶಕ್ಕೆ ಮಾದರಿಯಾಗಿದೆ. ಇನ್ನು ತನಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ ವೈದ್ಯರು ಹಾಗೂ ದಾದಿಯರಿಗೆ ಹೃದಯಾಂತರಾಳದ ಕೃತಜ್ಞತೆಗಳನ್ನು ಗುಣಮುಖರಾದ ಗರ್ಭಿಣಿ ಸಲ್ಲಿಸಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಮಾಧ್ಯಮಕ್ಕೆ ಗರ್ಭಿಣಿ ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿ ಜಿಲ್ಲೆಗೆ ಬಂದ ತನಗೆ ಇಲ್ಲಿನ ವೈದ್ಯರು ಮತ್ತು ನರ್ಸ್ ಗಳು ನನಗೆ ದೈರ್ಯ ತುಂಬಿದ್ದಾರೆ.
ನನ್ನಲ್ಲಿದ್ದ ಭೀತಿಯನ್ನು ದೂರ ಮಾಡಿ, ತನಗೆ ಧೈರ್ಯ ತುಂಬಿದ್ದಾರೆ. ಅವರ ಧೈರ್ಯ ತುಂಬುವ ಮಾತುಗಳಿಂದ ತಾನು ಸಂಪೂರ್ಣ ಗುಣಮುಖರಾಗಿಸುವಂತೆ ಮಾಡಿದ್ದಾರೆ. ನನಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದು, ಇಲ್ಲಿ ಅತ್ಯುತ್ತಮ ರೀತಿಯ ಚಿಕಿತ್ಸೆ ದೊರೆತಿದೆ. ಮನೆಯಲ್ಲಿಯೇ ಚಿಕಿತ್ಸೆ ಪಡೆದಂತೆ ಅನಿಸಿದೆ. ಪ್ರಸ್ತುತ ನಾನು ಸಂಪೂರ್ಣ ಗುಣಮುಖಳಾಗಿದ್ದು, ದೇವರಿಚ್ಚೆಯಿದ್ದರೆ ಮುಂದೆ ನನ್ನ ಹೆರಿಗೆಗೆ ಸಹ ಉಡುಪಿಗೆ ಆಗಮಿಸುತ್ತೇನೆ ಎಂದರು. ತನಗೆ ಚಿಕಿತ್ಸೆ ನೀಡಿದ ಜಿಲ್ಲಾಡಳಿತ ಮತ್ತು ಕೋವಿಡ್ ಆಸ್ಪತ್ರೆಯ ಎಲ್ಲಾ ವೈದ್ಯರು, ನರ್ಸ್ ಗಳು ಮತ್ತು ಇತರೆ ಎಲ್ಲಾ ಸಿಬ್ಬಂದಿಗೆ ಮಹಿಳೆ ಧನ್ಯವಾದ ತಿಳಿಸಿದರು.
ಗುಣಮುಖರಾದ ಗರ್ಭಿಣಿಗೆ ಜಿಲ್ಲಾಡಳಿತದ ಮೂಲಕ ಸಾಂಪ್ರದಾಯಿಕವಾಗಿ, ಮಲ್ಲಿಗೆ ಹೂ, ಹಣ್ಣುಗಳು ಮತ್ತು ಸಿಹಿತಿಂಡಿಯನ್ನು ನೀಡುವುದರ ಮೂಲಕ ಭಾವನಾತ್ಮಕವಾಗಿ ಬೀಳ್ಕೊಡಲಾಯಿತು. ಜಿಲ್ಲಾಧಿಕಾರಿ ಜಿ.ಜಗದೀಶ್ ಮತ್ತು ಎಸ್ಪಿ ವಿಷ್ಣುವರ್ಧನ್ ಮಹಿಳೆಗೆ ಸಿಹಿತಿಂಡಿ ನೀಡಿದರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ಮಲ್ಲಿಗೆ ಹೂ ಮತ್ತು ಹಣ್ಣು ನೀಡಿ ಹಾರೈಸಿದರು.
ಗರ್ಭಿಣಿಯನ್ನು ಗುಣಪಡಿಸುವ ಮೂಲಕ ಉಡುಪಿ ಜಿಲ್ಲೆಯ ವೈದ್ಯರು ಹಾಗೂ ಜಿಲ್ಲಾಡಳಿತ ಎರಡು ಜೀವಗಳಿಗೆ ಮರುಜೀವವನ್ನು ನೀಡಿದ್ದು, ತಮ್ಮೆದುರಿದ್ದ ಸವಾಲನ್ನು ಮೆಟ್ಟಿನಿಂತಿದ್ದಾರೆ. ಉಡುಪಿ ಜಿಲ್ಲೆಯವರಲ್ಲದಿದ್ದರೂ ಭಟ್ಕಳದ ಗರ್ಭಿಣಿಗೆ ಚಿಕಿತ್ಸೆ ನೀಡುವ ಜವಾಬ್ದಾರಿಯನ್ನು ಉಡುಪಿ ಜಿಲ್ಲಾಡಳಿತ ಹಾಗೂ ವೈದ್ಯರು ವಹಿಸಿಕೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಇಲ್ಲದ ಕಾರಣ ಉತ್ತಮ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಡಳಿತದಲ್ಲಿ ಮನವಿ ಮಾಡಿದ್ದರು. ಉಡುಪಿ ಜಿಲ್ಲಾಡಳಿತ ಮುತುವರ್ಜಿ ವಹಿಸಿಕೊಂಡು ಮಹಿಳೆಗೆ ಗುಣಮಟ್ಟದ ಚಿಕಿತ್ಸೆ ನೀಡಿ ಅವರನ್ನು ಗುಣಮುಖಗೊಳಿಸಿದ್ದಾರೆ.