ಕಾರ್ಕಳ, ಏ 25(Daijiworld News/MSP):: ಸೂಡ ಗ್ರಾಮದಲ್ಲಿ ಕ್ರಶರ್ ನಲ್ಲಿ ಅಳವಡಿಸಿದ ಸುಮಾರು ರೂ. 40 ಲಕ್ಷ ಮೌಲ್ಯದ ಯಂತ್ರೋಪಕರಣಗಳನ್ನು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಶಿಕ್ಷಕ ಸಹಿತ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೈನ್ ನೇತೃತ್ವದ ಪೊಲೀಸರ ತಂಢ ಬಂಧಿಸಿದ್ದಾರೆ.
ಸೂಡಾ ಗ್ರಾಮದ ಸರ್ವೆ ನಂಬ್ರ: 168-P1ರಲ್ಲಿ ಸುಮಾರು 3,50 ಎಕ್ರೆ ಪ್ರದೇಶದ ಕ್ರಶರ್ನಲ್ಲಿ ಜೋಡಣೆಯಾಗಿದ್ದ ಯಂತ್ರೋಪಕರಣವು ಫೆಬ್ರವರಿ ೨೭ರಿಂದ ಎಪ್ರಿಲ್ 22ರ ಅವಧಿಯಲ್ಲಿ ಕಳವು ಆಗಿದೆ ಈ ಕುರಿತು ಸುರೇಶ್ ಶೆಟ್ಟಿ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದರು. ಸೂಡಾದ ಶಿಕ್ಷಕ ರಿತೇಶ್ ಶೆಟ್ಟಿ( 50) ಹಾಗೂ ಚರಣ್ ನಾಯಕ್ ಸೂಡಾ( 29) ಎಂಬವರು ಪ್ರಕರಣ ಆರೋಪಿಗಳಾಗಿದ್ದಾರೆ.
ರೂ. 40 ಲಕ್ಷ ಸೊತ್ತು ಬಂದರು ಗುಜುರಿ ಪಾಲಾಯಿತು!
ಆರೋಪಿ ಚರಣ್ ನಾಯಕ್ ಸೂಡಾ ಸ್ಥಳೀಯ ವಾಹಿನಿಯೊಂದರಲ್ಲಿ ವರದಿಗಾರನಾಗಿ ದುಡಿಯುತ್ತಿದ್ದನು. ಆತನ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಪೊಲೀಸರು ಕೇಸುದಾಖಲಿಸಿದ್ದಾರೆ. ಮಂಗಳೂರಿನ ಬಂದರಿನಲ್ಲಿ ಗುಜುರಿ ವ್ಯಾಪಾರಿಗಳಾದ ಹುಸೈನ್ ಹಾಗೂ ಇಸ್ಮಾಯಿಲ್ ಅವರನ್ನು ಚರಣ್ ನಾಯಕ್ ಸೂಡಾ ಸಂಪರ್ಕಿಸಿ ವ್ಯವಹಾರ ಕುದುರಿಸಿದನು.
ಪ್ರಕರಣದ ದೂರುದಾರ ಸುರೇಶ್ ಎಂಬವರಿಗೆ ಸೇರಿರುವ ಕ್ರಶರ್ ನೊಳಗೆ ಗುಜರಿ ವ್ಯಾಪಾರಿಗಳಾದ ಹುಸೈನ್ ಹಾಗೂ ಇಸ್ಮಾಯಿಲ್ ಅವರಿಬ್ಬರನ್ನು ಕರೆದುಕೊಂಡು ಬಂದಿದ್ದ ಆರೋಪಿ ಚರಣ್ ನಾಯಕ್ ಸೂಡಾ ಇದು ನಮಗೆ ಸೇರಿರುವ ಕ್ರಶರ್ ಆಗಿದ್ದು, ಕ್ರಶರ್ ಬಂದಾಗಿ ವರ್ಷಗಳೇ ಸಂದು ಹೋಗಿದೆ. ಯಂತ್ರೋಪಕರಣ ಮೂಲೆಗುಂಪಾಗಿದೆ ಅದನ್ನು ಮಾರಾಟ ಮಾಡುವ ಉದ್ದೇಶ ಹೊಂದಿರುವುದಾಗಿ ನಂಬಿಸಿದ್ದಾನೆ.
ಜೆಸಿಬಿ ಮೂಲಕ ಪರಿಸರದ ಸ್ವಚ್ಚತೆ ಕಾರ್ಯ ನಡೆಸಿ ಕ್ರಶರ್ನಲ್ಲಿ ಇದ್ದ ಯಂತ್ರೋಪಕರಣಗಳನ್ನು ಬಿಡಿ ಬಿಡಿ ಭಾಗಗಳನ್ನಾಗಿರಿಸಲು ಒಂದು ವಾರ ತಗುಲಿದ್ದು, ಇದೇ ಸಂದರ್ಭದಲ್ಲಿ ಅಲ್ಲಿ ದುಡಿಯುತ್ತಿದ್ದವರಿಗೆ ಆರೋಪಿ ಚರಣ್ ನಾಯಕ್ ಸೂಡಾ ಉಪಹಾರ ಹಾಗೂ ಭೋಜನದ ವ್ಯವಸ್ಥೆಯನ್ನು ಮಾಡಿದ್ದಾನೆಂಬ ವಿಚಾರ ಪೊಲೀಸರ ಮೂಲಗಳಿಂದ ತಿಳಿದುಬಂದಿದೆ.
ಈ ಎಲ್ಲ ಬೆಳವಣಿಗೆಯ ನಡುವೆ ಆರೋಪಿ ಚರಣ್ ನಾಯಕ್ ಸೂಡಾನ ಹೆಸರಿನಲ್ಲಿ ಇರುವ ಬ್ಯಾಂಕ್ ಖಾತೆಗೆ ಗುಜುರಿ ವ್ಯಾಪಾರಿಗಳು ಒಂದು ಲಕ್ಷ ಜಮೆ ಮಾಡಿ ರೂ. 80 ಸಾವಿರ ಮೊತ್ತವನ್ನು ನಗದು ರೂಪದಲ್ಲಿ ಸಂದಾಯಮಾಡಿದ್ದಾರೆ. ಅದರಲ್ಲಿ ರೂ. 50 ಸಾವಿರ ಮೊತ್ತಯವನ್ನು ಶಿಕ್ಷಕ ರಿತೇಶ್ ಶೆಟ್ಟಿಗೆ ಅದಾಗಲೇ ನೀಡಿರುವುದಾಗಿ ತನಿಖೆಯ ವೇಳೆ ಆರೋಪಿ ಪೊಲೀಸರಲ್ಲಿ ಬಾಯಿ ಬಿಟ್ಟಿದ್ದಾನೆ.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಾದ ಚರಣ್ ನಾಯಕ್ ಸೂಡಾ ಹಾಗೂ ಶಿಕ್ಷಕ ರಿತೇಶ್ ಶೆಟ್ಟಿ ಇವರನ್ನು ಬಂಧಿಸಿರುವ ಗ್ರಾಮಾಂತರ ಠಾಣಾಧಿಕಾರಿ ನಾಜೀರ್ ಹುಸೈನ್ ನ್ಯಾಯಧೀಶರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿ ಚರಣ್ ನಾಯಕ್ ಸೂಡಾನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ಕುಮಾರ್ ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.