ಉಳ್ಳಾಲ, ಏ 25 (Daijiworld News/MSP): ಕೋವಿಡ್-19 ಪರೀಕ್ಷಾ ಕೇಂದ್ರ ಹಾಕುವ ಜಾಗಕ್ಕೆ ಸಂಬಂಧಿಸಿ ಉದ್ಭವಿಸಿದ ಗೊಂದಲದಿಂದಾಗಿ, ಬಹುವರ್ಷಗಳ ಕಾಲ ನೆನಗುದಿಗೆ ಬಿದ್ದಿ ಗಡಿಭಾಗ ಸರ್ವೇ ಕಾರ್ಯ ಆತುರದಲ್ಲಿ ಗುರುವಾರ ನಡೆದು ಸರಿಸುಮಾರು 50 ವರ್ಷಗಳಿಂದ ಕರ್ನಾಟಕದಲ್ಲಿದ್ದಂತಹ ಪೆಟ್ರೋಲ್ ಪಂಪ್ ನ ಮುಕ್ಕಾಲು ಅಂಶ ಜಾಗ ಕೇರಳಕ್ಕೆ ಸೇರ್ಪಡೆಗೊಂಡಿದೆ.
ಕೆಳಗಿನ ತಲಪಾಡಿಯಲ್ಲಿ ಹಲವು ವರ್ಷಗಳಿಂದ ಪೆಟ್ರೋಲ್ ಪಂಪ್ ಕಾರ್ಯಾಚರಣೆ ನಡೆಸುತಿತ್ತು. ಮಂಗಳೂರು-ತಲಪಾಡಿ ನಡುವಿನ ಸುಮಾರು 40 ಬಸ್ಸುಗಳು ಇದೇ ಪೆಟ್ರೋಲ್ ಪಂಪ್ ನಲ್ಲಿ ಕರ್ನಾಟಕದ ತೈಲ ಬೆಲೆಯಡಿ, ಬೆಲೆ ಕೊಟ್ಟು ಡಿಸೀಲ್ ಹಾಕಲಾಗುತಿತ್ತು. ಬಂಕ್ ಮಾಲೀಕರು ಕರ್ನಾಟಕದ ಕಂದಾಯ ಇಲಾಖೆಯಿಂದ ಅನುಮತಿ ಪಡೆದು ತೆರಿಗೆಯನ್ನು ಪಾವತಿಸುತ್ತಿದ್ದರು.
ಆದರೆ ಇದೀಗ ಕೇರಳ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಕೋವಿಡ್-19 ತಾತ್ಕಾಲಿಕ ಪರೀಕ್ಷಾ ಕೇಂದ್ರವನ್ನು ಕರ್ನಾಟಕದ ಜಾಗದಲ್ಲಿ ಹಾಕಿದ್ದಾರೆಂದು ತಲಪಾಡಿ ಗ್ರಾ.ಪಂ ಆರೋಪಿಸಿದ ಹಿನ್ನೆಲೆಯಲ್ಲಿ ಗೊಂದಲ ಉಂಟಾಯಿತು. ದ.ಕ ಮತ್ತು ಕಾಸರಗೋಡು ಜಿಲ್ಲೆಗಳ ಕಂದಾಯ ಇಲಾಖೆಗೆ ಸರ್ವೇ ನಡೆಸುವಂತೆ ಗಡಿಗುರುತು ಗುರುತಿಸುವಂತೆ ಎರಡು ಜಿಲ್ಲಾಡಳಿತ ಆದೇಶಿಸಿದ ಹಿನ್ನೆಲೆಯಲ್ಲಿ ಗುರುವಾರ ಇಡೀ ದಿನ ಸರ್ವೇಯರ್ ಗಳ ಮೂಲಕ ಸವೆ ಕಾರ್ಯ ನಡೆದಿತ್ತು. ಆದರೆ ಸರ್ವೆ ಕಾರ್ಯದಿಂದ ಇದೀಗ ಕರ್ನಾಟಕಕ್ಕೆ ನಷ್ಟವಾಗಿದೆ. ಈವರೆಗೆ ಇದ್ದಂತಹ ಪೆಟ್ರೋಲ್ ಪಂಪ್ ಇರುವ ಸ್ಥಳದ ಮುಕ್ಕಾಲು ಭಾಗ ಕೇರಳಕ್ಕೆ ಸೇರಿದ್ದಾಗಿದೆ. ಅಲ್ಲದೆ ಕೇರಳ ಪೊಲೀಸರು ಹಾಕಿರುವ ಚೆಕ್ ಪೋಸ್ಟ್ ಕೂಡ ಅವರ ಜಾಗದಲ್ಲಿಯೇ ಇರುವುದಾಗಿ ವರದಿ ದೊರೆತಿದೆ. ತಾತ್ಕಾಲಿಕ ಪರೀಕ್ಷಾ ಕೇಂದ್ರಕ್ಕೆ ಸರ್ವೆ ಕಾರ್ಯ ಬೇಡವಿತ್ತು. ಸಣ್ಣ ವಿಚಾರಕ್ಕೆ ಸಂಬಂಧಿಸಿ ಇಡೀ ಸರ್ವೆ ಕಾರ್ಯ ನಡೆಸುವಂತೆ ಮಾಡಿ ಇದೀಗ ಇದ್ದ ಸ್ಥಳವನ್ನು ಕಳೆದುಕೊಳ್ಳುವಂತಾಗಿದೆ ಅನ್ನುವುದು ತಲಪಾಡಿ ನಾಗರಿಕರ ಆರೋಪವಾಗಿದೆ.