ಮಂಗಳೂರು, ಎ.25 (DaijiworldNews/PY) : ಸಾಮಾಜಿಕ ಜಾಲತಾಣದಲ್ಲಿ ವೃದ್ಧೆಯ ಅಂತ್ಯಸಂಸ್ಕಾರದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ರವಾನೆಯಾದ ಕಾರಣ ಪಚ್ಚನಾಡಿ ಸ್ಮಶಾನದಲ್ಲಿ ಬಹಳಷ್ಟು ಜನ ಸೇರಿದ್ದರು. ಕಾನೂನಿಕ ತೊಂದರೆಯಾಗಬಾರದೆಂದು ಜನರನ್ನು ಸಮಾಧಾನಿಸಿ ಸರಿಯಾದ ಮಾಹಿತಿ ನೀಡಲು ಸ್ಥಳಕ್ಕೆ ತೆರಳಿದ್ದೇನೆ ಬದಲಾಗಿ ಅಂತ್ಯಸಂಸ್ಕಾರವನ್ನು ತಡೆಯಲು ಹೋಗಿಲ್ಲ. ಈ ವಿಚಾರವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ. ಹೇಳಿದ್ದಾರೆ.
ಪಚ್ಚನಾಡಿ ಸ್ಮಶಾನದಲ್ಲಿ ಜಿಲ್ಲಾಡಳಿತವು ಮೊದಲೇ ವೃದ್ದೆಯ ಮೃತದೇಹನ್ನು ಕೊಂಡೊಯ್ದು ಇಡಲಾಗಿತ್ತು ಎಂಬ ಮಾಹಿತಿ ತಪ್ಪು. ತಪ್ಪಾದ ಮಾಹಿತಿ ರವಾನೆಯಾದ ಕಾರಣ ಬಹಳಷ್ಟು ಜನ ಪಚ್ಚನಾಡಿ ಸ್ಮಶಾನದ ಬಳಿ ಸೇರಿದ್ದರು. ಪರಿಸ್ಥಿತಿ ಕೈ ಮೀರಿದರೆ ಸಮಸ್ಯೆ ಎದುರಾಗಬಹುದೆಂದು ತಿಳಿದು ಸ್ಥಳ ಬದಲಿಸಲಾಯಿತು ಎಂದು ತಿಳಿಸಿದರು.
ಚಿತೆಯಲ್ಲಿ ಕೊರೊನಾ ಸೋಂಕಿತರನ್ನು ದಹಿಸುವುದರಿಂದ ಸೋಂಕು ಹರಡುವುದಿಲ್ಲ. ವೈದ್ಯನಾಗಿ ಈ ವಿಚಾರದ ಬ್ಗಗೆ ಮಾಹಿತಿ ತಿಳಿದುಕೊಂಡಿದ್ದೇನೆ. ಈ ಬಗ್ಗೆ ತಜ್ಞರೂ ಹೇಳಿದ್ದಾರೆ. ಆ ಬಗ್ಗೆ ವೈದ್ಯನಾಗಿಯೂ ಯೋಚಿಸಲು ಸಾಧ್ಯವಿಲ್ಲ. ಪರಿಸರದಲ್ಲಿ ಸೋಂಕಿತರ ಅಂತ್ಯಸಂಸ್ಕಾರದಿಂದ ದುಷ್ಪರಿಣಾಮ ಆಗುವುದಿಲ್ಲ ಎಂಬ ಬಗ್ಗೆ ಜನರಿಗೆ ತಿಳಿಸಬೇಕಿದೆ. ಈ ರೀತಿ ಮುಂದೆ ಆಗದಂತೆ ಜಿಲ್ಲಾಡಳಿತ ಸರಿಯಾದ ಕ್ರಮ ತೆಗೆದುಕೊಳ್ಳಲಿದೆ. ಕೊರೊನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಇಡೀ ಕುಟುಂಬವೇ ದೂರವಿದ್ದು, ಬರಲಾಗದೇ ಸಂಕಟ ಪಡುತ್ತಿರುವ ಸಂದರ್ಭ ಭಾವನಾತ್ಮಕವಾಗಿ ಯೋಚನೆ ಮಾಡುವುದರೊಂದಿಗೆ ಮಾನವೀಯತೆಯಿಂದ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ. ಈ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದಿಲ್ಲ ಎಂದಿದ್ದಾರೆ.