ಕಾಪು, ಏ 25 (Daijiworld News/MSP): ಕಟಪಾಡಿ ಮತ್ತು ಕಾಪುವಿನಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ವಾಸ್ತವ್ಯವಿದ್ದ ೨೬ ಮಂದಿ ವಲಸೆ ಕಾರ್ಮಿಕರನ್ನು ಶನಿವಾರ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಕಾಪು ತಹಶೀಲ್ದಾರ್ ಮಹಮ್ಮದ್ ಐಸಾಕ್ ಅವರ ನೇತೃತ್ವದಲ್ಲಿ ಅವರವರ ಊರಿಗೆ ಕಳುಹಿಸಿಕೊಡಲಾಯಿತು.
ಕೊಪ್ಪದ ೨ ಮಂದಿ ಕಾಪುವಿನಲ್ಲಿದ್ದ ಹಾವೇರಿಯ 8, ಹಾಗೂ ಕಟಪಾಡಿಯಲ್ಲಿದ್ದ ಹಾವೇರಿಯ 9, ಧಾರವಾಡದ ೨, ಬಾಗಲಕೋಟೆಯ 2, ಬೆಳಗಾವಿ1 ಬಿಜಾಪುರ 2 ಸಹಿತ 26 ಜನರನ್ನು ವಿಶೇಷ ಕೆಎಸ್ಆರ್ಟಿಸಿ ಬಸ್ಸಿನ ಮೂಲಕ ಕಳುಹಿಸಿ ಕೊಡಲಾಗಿದೆ. ಪ್ರತೀ ಬಸ್ಸಿನಲ್ಲಿ ಕಾರ್ಮಿಕರ ಮೇಲ್ವಿಚಾರಣೆ ನೋಡಿಕೊಳ್ಳಲು ಒಬ್ಬ ವಿಎ ಮತ್ತು ಒಬ್ಬ ಪೋಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಕಾಪು ಮತ್ತು ಕಟಪಾಡಿಯಲ್ಲಿ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಕಾರ್ಯಕರ್ತರು ಹೃದಯಸ್ಪರ್ಶಿಯಾಗಿ ಕಾರ್ಮಿಕರನ್ನು ಬೀಳ್ಕೊಟ್ಟಿದ್ದು, ಕಾರ್ಮಿಕರಿಗೆ ಬಿಸ್ಕೆಟ್, ನೀರಿನ ಬಾಟಲ್ ಹಾಗೂ ಪುಲಾವ್ ಮತ್ತು ಚಿತ್ರಾನವನ್ನು ಕಟ್ಟಿ ನಿಡಿದ್ದರು. ಕಟಪಾಡಿ ತಾತ್ಕಾಲಿಕ ಪುನರ್ವಸತಿ ಕೇಂದ್ರವನ್ನು ನಿರ್ವಹಿಸುತ್ತಿದ್ದ ಎಸ್ವಿಎಸ್ ವಿದ್ಯಾಸಂಸ್ಥೆ ಮತ್ತು ರೋಟರಿ ಕ್ಲಬ್, ಜೆಸಿಐ ಸಂಸ್ಥೆ, ಪ್ರೇರಣಾ ಪ್ರತಿಷ್ಠಾನ, ಯುವವಾಹಿನಿ, ಇನ್ವೆಂಜರ್ಸ್ ಸಂಸ್ಥೆಯ ವತಿಯಿಂದ ಕೇಂದ್ರದಲ್ಲಿ ದಾಖಲಾಗಿದ್ದ ಕಾರ್ಮಿಕರಿಗೆ ಕೈಗೊಂದಿಷ್ಟು ಹಣವನ್ನು ಕೂಡಾ ಕೊಟ್ಟು ಕಳುಹಿಸಲಾಯಿತು. ಕಳೆದ ಒಂದು ತಿಂಗಳಿಂದ ಇಲ್ಲಿ ತಮ್ಮನ್ನು ಮನೆಯವರಂತೆ ನೋಡಿಕೊಂಡ ಇಲ್ಲಿನವರ ಹೃದಯವೈಶಾಲ್ಯತೆಗೆ ಕಾರ್ಮಿಕರು ಕಣ್ಣುತುಂಬಿ ಕೃತಜ್ಞತೆ ಸಲ್ಲಿಸಿದ ಘಟನೆಯೂ ನಡೆಯಿತು.
ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ನಿರೀಕ್ಷಕ ರವಿಶಂಕರ್, ಪಿಡಿಒ ಇನಾಯತುಲ್ಲಾ ಬೇಗ್, ಗ್ರಾಮ ಲೆಕ್ಕಾಧಿಕಾರಿ ದೇನಿಯಲ್ ದೊಮಿನಿಕ್ ಡಿಸೋಜಾ, ಎಸ್ವಿಎಸ್ ವಿದ್ಯಾ ಸಂಸ್ಥೆಯಗಳ ಸಂಚಾಲಕ ಕೆ ಸತ್ಯೇಂದ್ರ ಪೈ, ಕಾಪು ಕೇಂದ್ರದ ನಿರ್ವಾಹಕರುಗಳಾದ ಪಂಡರಿನಾಥ್, ಜಗದೀಶ್ ಗಣೇಶ್ ನಾಯಕ್, ಕಟಪಾಡಿ ರೋಟರಿ ಅಧ್ಯಕ್ಷ ಉಮೇಶ್ ರಾವ್, ಜೆಸಿಐ ಮಹೇಶ್ ಅಂಚನ್, ಪ್ರೇರಣಾ ಪ್ರತಿಷ್ಠಾನದ ರಾಘವೇಂದ್ರ ರಾವ್, ಶ್ರೀಕರ್ ಅಂಚನ್, ಯುವವಾಹಿನಿಯ ಭಾಸ್ಕರ ಪೂಜಾರಿ, ಪ್ರಮುಖರಾದ ಶ್ರೀನಿವಾಸ ಶೆಣೈ,ದಿನೇಶ್ ಕಿಣಿ, ಸುಧಿರ್ ಡಿ. ಬಂಗೇರ ಎಸ್ಜೆ ದಿನೇಶ್, ಸುದರ್ಶ ಮಲ್ಯ ಪೋಲೀಸ್ ಸಿಬಂದಿ ಉಪಸ್ಥಿತರಿದ್ದರು.