ತಿರುಚ್ಚಿ, ಮಾ 08: ಚಲಿಸುತ್ತಿದ್ದ ಬೈಕ್ ಗೆ ಪೊಲೀಸ್ ಒದ್ದ ಪರಿಣಾಮ ತನ್ನ ಪತಿಯ ಜತೆಯಲ್ಲಿ ಸಾಗುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರು ರಸ್ತೆಗುರುಳಿ ಮೃತಪಟ್ಟ ಘಟನೆ ಬುಧವಾರ ತಿರುಚ್ಚಿ ಸಮೀಪದ ತುವಕುಡಿ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಇನ್ನು ಘಟನೆಯಲ್ಲಿ ಮೃತರಾದ ಸೂಲಪೇಟೆ ಮೂಲದ ಉಷಾರ ಪತಿ ರಾಜಾ ಗಂಭೀರ ಗಾಯಗೊಂಡಿದ್ದಾರೆ. ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕಾಗಿ ಬೈಕ್ ಮೇಲೆ ಹೋಗುತ್ತಿದ್ದ ದಂಪತಿಗಳನ್ನು ಪೊಲೀಸರು ಬೆನ್ನತ್ತಿದ್ದು, ಈ ವೇಳೆ ಪೊಲೀಸರು ದಂಪತಿ ಹೋಗುತ್ತಿದ್ದ ಬೈಕ್ಗೆ ಒದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಒದ್ದ ರಭಸಕ್ಕೆ ಬೈಕ್ ನಿಯಂತ್ರಣ ತಪ್ಪಿದ್ದು ಈ ಸಂದರ್ಭ ಗರ್ಭಿಣಿ ಜಾರಿ ಕೆಳಗೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ನಂತರ ಜನರ ಆಕ್ರೋಶದ ಭಯದಿಂದ ಸ್ಥಳದಿಂದ ಪೊಲೀಸ್ ಕಾಲ್ಕಿತ್ತಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಸ್ಥಳದಲ್ಲಿ ಉದ್ರೀಕ ವಾತಾವರಣ ನಿರ್ಮಾಣವಾಗಿದ್ದು ಸುಮಾರು 3,000ಕ್ಕೂ ಅಧಿಕ ಆಕ್ರೋಶಿತ ಜನ ಪ್ರತಿಭಟಿಸಲಾರಂಭಿಸಿದ ಕಾರಣ ತಂಜಾವೂರು-ತಿರುಚ್ಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಗಂಟೆಗಳ ಕಾಲ ಸಂಚಾರ ದಟ್ಟಣೆ ಕಂಡುಬಂತು. ಇದೇ ವೇಳೆ ಉದ್ರೀಕ್ತರು ಕಲ್ಲೆಸೆದ ಪರಿಣಾಮ ಲಘು ಲಾಠಿ ಚಾರ್ಜ್ ನಡೆಸಬೇಕಾಯಿತು.
ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ರಾಜಕೀಯ ಮುಖಂಡರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ಮಾಡಿರುವ ಟ್ರಾಫಿಕ್ ಪೊಲೀಸ್ನ್ನ ಈಗಾಗಲೇ ಅಮಾನತು ಮಾಡಿ ಆದೇಶ ಸಹ ಹೊರಡಿಸಲಾಗಿದೆ.