ಬಂಟ್ವಾಳ, ಏ 25 (DaijiworldNews/SM): ಸರಕಾರದ ಲಾಕ್ಡೌನ್ ಆದೇಶದ ನಡುವೆಯೂ ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದವರಿಗೆ ಶನಿವಾರ ಪೊಲೀಸರು ಏಕಕಾಲದಲ್ಲಿ ಮೂರು ಕಡೆ ಕಾರ್ಯಾಚರಣೆ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದಲ್ಲಿ ಬಂಟ್ವಾಳ ನಗರ ಪಿಎಸ್ಐ ಅವಿನಾಶ್ ಅವರ ನೇತೃತ್ವದಲ್ಲಿ, ಉಳಿದಂತೆ ಬಿ.ಸಿ.ರೋಡು ಜಂಕ್ಷನ್ನಲ್ಲಿ ಮಂಗಳೂರು ಕಡೆಯಿಂದ ಆಗಮಿಸಿದ ವಾಹನಗಳನ್ನು ಅಪರಾಧ ವಿಭಾಗದ ಪಿಎಸ್ಐ ಸಂತೋಷ್ ಅವರ ನೇತೃತ್ವದಲ್ಲಿ ಹಾಗೂ ಮೆಲ್ಕಾರ್ನಲ್ಲಿ ಸಂಚಾರಿ ಠಾಣಾ ಪಿಎಸ್ಐಗಳಾದ ರಾಜೇಶ್ ಕೆ.ವಿ. ಹಾಗೂ ರಾಮ ನಾಯ್ಕ್ ಅವರು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಪ್ರತಿ ವಾಹನಗಳನ್ನು ತಡೆದು ವಿಚಾರಣೆ ನಡೆಸಿದ ಪೊಲೀಸರು ಅಗತ್ಯ ವಸ್ತುಗಳ ಸಾಗಾಟದ ವಾಹನಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ಒಬ್ಬರೇ ಓಡಾಟ ನಡೆಸಬೇಕು. ಆಟೋ, ಖಾಸಗಿ ವಾಹನಗಳಲ್ಲಿ ಹಿಂಬದಿ ಒಬ್ಬರಿಗೆ ಮಾತ್ರ ಎಂಬ ಆದೇಶವಿದ್ದರೂ ಜನರು ಅದನ್ನು ಉಲ್ಲಂಘನೆ ಮಾಡಿ ತಿರುಗಾಡುತ್ತಿದ್ದರು.
ಶನಿವಾರ ಬೆಳ್ಳಂಬೆಳಗ್ಗೆಯೇ ಕಾರ್ಯಾಚರಣೆ ನಡೆಸಿದ ಪೊಲೀಸರು ಅಗತ್ಯ ಸಾಮಾಗ್ರಿಗಳ ಖರೀದಿ ನೆಪದಲ್ಲಿ ತಿರುಗಾಡುತ್ತಿದ್ದರಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ. ಬಿ.ಸಿ.ರೋಡು ನಾರಾಯಣ ಗುರು ವೃತ್ತದ ಬಳಿ ಹೆಚ್ಚಿನ ವಾಹನಗಳನ್ನು ವಿಚಾರಣೆ ನಡೆಸಲಾಗಿದೆ. ಅದೇ ರೀತಿಯಲ್ಲಿ ಬಂಟ್ವಾಳದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ನಿಟ್ಟಿನಲ್ಲಿ ಅಲ್ಲಿನ ಜನರು ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಜನರೇ ಸ್ವಯಂ ರಕ್ಷಣೆ ಮಾಡಿಕೊಂಡು ಕೊರೊನಾ ನಿಯಂತ್ರಿಸಲು ಸಂಪೂರ್ಣ ಸಹಕಾರ ನೀಡಬೇಕಾಗಿದೆ.